ಬೆಂಗಳೂರು: ಕರೊನಾ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರಿಗೆ ನೀಡಿದ್ದು, ಶುಕ್ರವಾರ 20ಕ್ಕೂ ಹೆಚ್ಚು ಸೆಲೆಬ್ರೆಟಿಗಳು ಲೈವ್ ವಿಡಿಯೋ ಸಂವಾದದಲ್ಲಿ ಭಾಗಿಯಾದರು.
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿದ್ದ ‘ನಮ್ಮ ಮನೆ ನನ್ನ ಸುರಕ್ಷೆ’ ಹೆಸರಿನ ಈ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಅವರಲ್ಲದೆ ಪುನೀತ್ ರಾಜ್‌ಕುಮಾರ್, ಜಾವಗಲ್ ಶ್ರೀನಾಥ್, ರಾಗಿಣಿ ದ್ವಿವೇದಿ, ದಿಗಂತ್-ಐಂದ್ರಿತಾ, ಸುನೀಲ್ ಜೋಶಿ ಮುಂತಾದ ಸೆಲೆಬ್ರಿಟಿಗಳು ಸತತ 2 ಗಂಟೆಗಳ ಕಾಲ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅವರೇನು ಹೇಳಿದ್ದಾರೆ, ಬನ್ನಿ ನೋಡೋಣ.
* ಕರೊನಾ ವಾರಿಯರ್ಸ್‌ಗಳಿಂದ ನಾವು ಮನೆಯಲ್ಲಿ ಆರಾಮವಾಗಿದ್ದೇವೆ. ವೈದ್ಯರು, ನರ್ಸ್, ಪೊಲೀಸ್, ಬಿಬಿಎಂ ಸೇವೆಯನ್ನು ಯಾರೂ ಮರೆಯದಿರಿ. ನಾನು ಲಾಕ್‌ಡೌನ್ ಅವಧಿಯಲ್ಲಿ ಮೂರ್ನಾಲ್ಕು ರೀತಿ ಪಾಯಸ ಮಾಡುವುದು ಕಲಿತೆ. ಹೊಸತು ಕಲಿಯುವುದಕ್ಕೆ ಒಳ್ಳೆಯ ಅವಕಾಶ.
| ಸುನೀಲ್ ಜೋಶಿ, ಭಾರತ ಕ್ರಿಕೆಟ್ ತಂಡ ಮುಖ್ಯ ಆಯ್ಕೆಗಾರ
* ವಾರಿಯರ್ಸ್‌ಗಳು, ವಾಲೆಂಟಿಯರ್‌ಗಳು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ, ಅವರಿಗೆ ಹಾಟ್ಸ್ ಆಫ್. ಮನೆಯಲ್ಲೇ ಮನರಂಜನೆಗೆ ಸಾಕಷ್ಟು ಅವಕಾಶವಿದೆ. ಅದನ್ನು ಬಳಸಿಕೊಂಡು ಮನೆಯಲ್ಲೇ ಇದ್ದು ಆರೋಗ್ಯವಂತರಾಗಿರೋಣ.
| ಪುನೀತ್ ರಾಜ್‌ಕುಮಾರ್, ನಟ
* ಸಂಬಳ ಬರುತ್ತಾ, ಕೆಲಸ ಇರುತ್ತೋ ಇಲ್ಲವೋ ಎಂಬ ಚಿಂತೆ ಸಹಜ. ಈ ಸಂದರ್ಭದಲ್ಲಿ ಸ್ವಲ್ಪ ಕಾಂಪ್ರಮೈಸ್ ಅನಿವಾರ್ಯ. ನನ್ನ ಕೈ ಆಪರೇಷನ್ ಆದಾಗ ಮುಂದಿನ ಭವಿಷ್ಯ ಹೇಗಪ್ಪ ಎಂದು ಪರ್ಯಾಯ ಕರಿಯರ್ ಬಗ್ಗೆ ಯೋಚಿಸಿದ್ದೆ. ಆದರೆ ಆತ್ಮವಿಶ್ವಾಸದಿಂದಿದ್ದೆ.
|ಜಾವಗಲ್ ಶ್ರೀನಾಥ್, ಐಸಿಸಿ ಮ್ಯಾಚ್ ರೆರಿ
* ಜಿಮ್‌ಗೆ ಹೋಗಲು ಆಗಲ್ಲ ಎಂದು ವರ್ಕೌಟ್ ಬಿಡಬೇಡಿ. ಮನೆಯಲ್ಲೇ ಯೋಗ, ವರ್ಕೌಟ್ ಮಾಡಬಹುದು, ನಾವು ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡು ವರ್ಕೌಟ್ ಮಾಡುತ್ತೇವೆ. ಸರ್ಕಾರದ ಸೂಚನೆ ಪಾಲಿಸೋಣ. ಡಾಕ್ಟರ್, ನರ್ಸ್‌ಗಳು ನಿಜವಾದ ಹೀರೋಗಳು.
| ದಿಗಂತ್, ಐಂದ್ರಿತಾ, ತಾರಾ ದಂಪತಿ
* ನಾನು ಕೊಡಗಿನಲ್ಲಿದ್ದೇನೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ಜತೆಗೆ ಅಮ್ಮನ ಅಡುಗೆಗೆ ಸಹಕಾರ ಮಾಡುತ್ತಿದ್ದೇನೆ. ಹೊಸ ರೆಸಿಪಿ ಮಾಡುತ್ತಿದ್ದೇವೆ. ರೊಟೀನ್ ನಿಂದ ಒಂದು ಬಿಡಗಡೆ ಸಿಕ್ಕಿದೆ.
| ರೋಹನ್ ಬೋಪಣ್ಣ, ಟೆನ್ನಿಸ್ ಆಟಗಾರ
* ಕೆಲವು ಕ್ರೀಡಾಪಟುಗಳಿಗೆ ತರಬೇತಿಗೆ ಹೋಗಲಾಗದೇ ಕಷ್ಟವಾಗುತ್ತದೆ. ನಾನು ಮನೆಯಲ್ಲಿಯೇ ಚಿಕ್ಕ ನೆಟ್ ಮಾಡಿಕೊಂಡು ಪ್ರಾಕ್ಟೀಸ್ ಮಾಡುತ್ತೇನೆ. ಸಾಮಾನ್ಯವಾಗಿ ಸದಾ ಬ್ಯುಸಿ ಇದ್ದವರಿಗೆ ಈಗ ಮನೆಯಲ್ಲೇ ಇರಬೇಕಾಗಿ ಬಂದಿದೆ. ಕೋವಿಡ್ ಕೆಲಸ ಮಾಡುತ್ತಿರುವವರಿಗೆ ಧನ್ಯವಾದ.
| ಅಶ್ವಿನಿ ಪೊನ್ನಪ್ಪ, ಕ್ರೀಡಾಪಟು
* ಲಾಕ್‌ಡೌನ್ ಅವಧಿಯಲ್ಲಿ ಮನಸ್ಸನ್ನು ಖಾಲಿ ಬಿಟ್ಟು ನೆಗೆಟಿವಿಟಿಗೆ ಅವಕಾಶ ಕೊಡಬಾರದು. ಬೆಳಗ್ಗೆ ಎಲ್ಲರೂ ಧ್ಯಾನ, ಸ್ಟ್ರೆಚಸ್‌ನಿಂದ ದಿನ ಆರಂಭಿಸಬಹುದು. ನಾನು ಅಪ್ಪ ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ಕ್ಲೌಡ್ ಕಿಚನ್ ಮಾಡಿ, ಆಹಾರ ವಿತರಿಸುತ್ತಿದ್ದೇವೆ.
| ರಾಗಿಣಿ ದ್ವಿವೇದಿ, ನಟಿ
* ಮನೆಯಿಂದ ಆದಷ್ಟು ಹೊರ ಹೋಗದಂತೆ ನೋಡಿಕೊಳ್ಳೋಣ. ಮನೆಯಲ್ಲೇ ಇರಲು ಸಾಕಷ್ಟು ಒತ್ತಡ ಉಂಟಾಗಬಹುದು. ಆದರೆ, ಕರೊನಾ ನಿಯಂತ್ರಿಸಲು ನಾವು ಮನೆಯಿಂದ ಹೊರಗೆ ಹೋಗದೇ ಇರುವುದು ಉತ್ತಮ.
| ನಿಹಾರ್ ಅಮೀನ್, ಸ್ವಿಮ್ಮಿಂಗ್ ಚಾಂಪಿಯನ್
* ಮನೆಯಿಂದ ಒಬ್ಬರು ಮಾತ್ರ ಅಗತ್ಯ ವಸ್ತುವನ್ನು ವಾರಕ್ಕೊಮ್ಮೆ ತರುವ ಮೂಲಕ ಓಡಾಟ ಕಡಿಮೆ ಮಾಡೋಣ. ನಮ್ಮ ಮನೆಯಿಂದ ನಾನೊಬ್ಬನೇ ವಾರಕ್ಕೊಮ್ಮೆ ಖರೀದಿಸಲು ಹೋಗುತ್ತೇನೆ. ಹಿರಿಯರನ್ನು ಈ ಸಂದರ್ಭದಲ್ಲಿ ಕಾಪಾಡಿಕೊಳ್ಳೋಣ, ಕಾಳಜಿ ವಹಿಸೋಣ.
| ರಾಬಿನ್ ಉತ್ತಪ್ಪ, ಕ್ರಿಕೆಟ್ ಆಟಗಾರ
* ಮನೆಯಲ್ಲೇ ಇರುವುದರಿಂದ ತಿನ್ನುವುದು ಹೆಚ್ಚಾಗುತ್ತದೆ, ಎಕ್ಸ್‌ರ್‌ಸೈಜ್ ಕಡಿಮೆಯಾಗುತ್ತದೆ. ಹೀಗಾಗಿ ಅತಿಯಾಗಿ ತಿನ್ನಬೇಡಿ. ಸೋಂಕು ನಿರೋಧಕ ಅರಿಷಿಣ ಬಳಸಿ. ಹಸಿ ಶುಂಠಿ ಜ್ಯೂಸ್ ಕೂಡ ಉತ್ತಮ. ಬ್ಲಾಕ್ ಟೀ ಕೂಡ ಒಳ್ಳೆಯದು.
| ಡಾ.ರೆಯಾನ್, ನ್ಯೂಟ್ರಿಷಿಯನ್ ಎಕ್ಸ್‌ಪರ್ಟ್
* ಇದು ಹೊಸತು ಕಲಿಯಲು ಒಳ್ಳೆಯ ಅವಕಾಶ. ನಾನು ಸ್ಟಾಕ್ ಮಾರ್ಕೆಟ್, ಎಕನಾಮಿ ಬಗ್ಗೆ ಕಲಿಯುತ್ತಿದ್ದೇನೆ. ಮನೆಯಲ್ಲಿ ಉಳಿಯಿರಿ, ಈ ಮೂಲಕ ಬೇರೆಯವರಿಗೂ ಸೋಂಕು ಹರಡದಂತೆ ರಕ್ಷಿಸಿ ಎಂದು ಹೇಳಬಯಸುವೆ
| ಪಂಕಜ್ ಅಡ್ವಾಣಿ, ಬಿಲಿಯರ್ಡ್ಸ್ ಆಟಗಾರ
* ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಸ್ಥಿತಿ ಸಮಾಧಾನಕರವಾಗಿದೆ. ಸರ್ಕಾರ ಏನೆಲ್ಲ ಮಾಡಬಹುದು ಅದೆಲ್ಲವನ್ನೂ ಮಾಡಿದೆ. ಸರ್ಕಾರಗಳು ಹೇಳಿದ ನಿಯಮ ಪಾಲಿಸೋಣ. ಜಾಗೃತರಾಗಿರುವ ಮೂಲಕ ಜವಾಬ್ದಾರಿಯಿಂದ ವರ್ತಿಸೋಣ.
| ನೇಹಾ ಶೆಟ್ಟಿ, ಚಿತ್ರ ನಟಿ
* ನಾನು ವರ್ಕೌಟ್, ಪ್ರಾಕ್ಟಿಸ್ ಮನೆಯಲ್ಲಿ ಮಾಡಿದ್ದೇ ಇಲ್ಲ. ಕಳೆದೊಂದು ತಿಂಗಳಿಂದ ಪೂರ್ಣ ಬದಲಾಗಿದ್ದೇನೆ. ವರ್ಕ್‌ಔಟ್ ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ಮನೆಯಲ್ಲೇ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದೇನೆ. ಮನೆಯಲ್ಲೇ ಇರೋಣ..
| ರೀತ್ ಅಬ್ರಹಾಮ್, ಅಥ್ಲೆಟ್
* ಮನೆಯಲ್ಲೇ ಇರುವುದರಿಂದ ಒಂದು ಗಂಟೆ ಎಕ್ಸರ್‌ಸೈಸ್ ಮಾಡುವುದು ಒಳ್ಳೆಯದು. ಸಣ್ಣಪುಟ್ಟ ವ್ಯಾಯಾಮ ಮಾಡಿದರೂ ಸಾಕು. ಸ್ಮಾರ್ಟ್ ಜಾಗ್ ಮಾಡಿದರೆ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಅಡ್ವಾನ್ಸ್ ವ್ಯಾಯಾಮ ಮಾಡಲೂ ಅವಕಾಶವಿದೆ.
| ಎಂಜಿ ಪ್ರಸಾದ್, ಫಿಟ್ನೆಸ್ ಎಕ್ಸ್‌ಪರ್ಟ್
* ಮಕ್ಕಳಿಗೆ ಜೀವಲ ಕೌಶಲ ಕಲಿಸಲು ಒಂದೊಳ್ಳೆ ಅವಕಾಶ. ಮನೆಯಲ್ಲಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಸಣ್ಣಪುಟ್ಟ ಅಡುಗೆ ಮಾಡುವುದನ್ನು ಹೇಳಿಕೊಡಬಹುದು. ನನ್ನ ಮಗಳು ರಂಗೋಲಿ ಕಲಿಯುತ್ತಿದ್ದಾಳೆ, ಮಗ ಕೇಕ್ ಮಾಡಿದ್ದಾರೆ.
| ರೇಖಾ ಪ್ರಸಾದ್, ನಟಿ
* ಮನೆಯಿಂದ ಹೊರಗೆ ಹೋಗಲು ಆಗಲ್ಲ, ಹೀಗಾಗಿ ಆನ್‌ಲೈನ್ ಸೆಶನ್ ಪಾಲ್ಗೊಳ್ಳುತ್ತೇನೆ. ಫಿಟ್ನೆಸ್ ಕೂಡ ಆನ್‌ಲೈನ್ ಮೂಲಕವೇ ಾಲೋ ಮಾಡುತ್ತೇನೆ. ನಮ್ಮ ಸರ್ಕಾರ ಸಾಕಷ್ಟು ಮುಂಜಾಗ್ರತೆ ಕ್ರಮಕೈಗೊಂಡಿದ್ದು, ವಾರಿಯರ್ಸ್‌ಗಳಿಗೆ ಧನ್ಯವಾದ ಅರ್ಪಿಸುವೆ.
| ಪ್ರಣವಿ ಅರಸ್, ಗಾಲ್ಫ್ ಆಟಗಾರ್ತಿ
ನಿಮಾನ್ಸ್‌ನ ವೈದ್ಯ ಡಾ.ಪ್ರದೀಪ್ ಟಿಪ್ಸ್:
ಏನಪ್ಪ ಹೀಗಾಯಿತು, ವೈರಸ್ ನಮಗೂ ಬರುತ್ತಾ, ಮುಂದೆ ಏನೋ ಎಂದು ಯೋಚಿಸುತ್ತಾ ಕುಳಿತುಕೊಳ್ಳಬೇಡಿ. ಈ ಸಂದರ್ಭದಲ್ಲಿ ಮಾನಸಿಕವಾಗಿ ಸಂತೋಷವಾಗಿರುವುದು ಮುಖ್ಯ. ಸಮಯವೇ ಸಾಕಾಗುತ್ತಿಲ್ಲ ಎಂದು ಹೇಳುತ್ತಿರುತ್ತೇವೆ, ಈಗ ಸಾಕಷ್ಟು ಸಮಯವಿದೆ. ಎಲ್ಲರ ಜತೆ ಮಾತನಾಡಿ, ಗೆಳೆಯರು, ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿ. ವಾಟ್ಸಪ್ ಗ್ರೂಪ್‌ನಲ್ಲಿ ಬರುವ ಸಂದೇಶಕ್ಕಿಂದ ಸರ್ಕಾರ ಸೂಚಿಸಿರುವ ವಿಷಯ ಗಮನಕ್ಕೆ ತೆಗೆದುಕೊಳ್ಳಿ. ಹಳೆ ಗ್ರಾಮೀಣ ಆಟಗಳನ್ನು ಆಡಿ.
ನಿಖಿಲ್ ಮದುವೆಯಲ್ಲಿ ಲಾಕ್‌ಡೌನ್ ನಿಯಮ ಪಾಲಿಸಿದ ಫೋಟೋ ಬಿಡುಗಡೆ ಮಾಡಿದ ಎಚ್‌ಡಿಕೆ ಕುಟುಂಬ