ಬೆಂಗಳೂರು: ಬೆಂಗಳೂರಿನಿಂದ ತೆಲಂಗಾಣಕ್ಕೆ ತೆರಳಿದ್ದ ಯುವಕನಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೇ ಆ ವ್ಯಕ್ತಿ ಓಡಾಡಿದ್ದ ಪ್ರದೇಶಗಳ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕೊರೊನಾ ಪೀಡಿತ ವ್ಯಕ್ತಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಇರುವವರು, ವಾಸವಾಗಿದ್ದ ಅಪಾರ್ಟ್ಮೆಂಟ್ ನಿವಾಸಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆತನ ಸಹೋದ್ಯೋಗಿಗಳ ಮೇಲೆ 28 ದಿನಗಳವರೆಗೆ ನಿಗಾ ಇರಿಸಲಾಗಿದೆ. ಇದುವರೆಗೂ ವಿದೇಶದಿಂದ ಬಂದ 40,000 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾರಲ್ಲೂ ಸೋಂಕು ದೃಢಪಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ. 630 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 24 ಗಂಟೆ ನಿಗಾ ವಹಿಸಲು ಇಲಾಖೆ ಸಜ್ಜಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.