ನವದೆಹಲಿ: ಮಾರಕ ಕೊರೊನಾ ಸೋಂಕು ವಿಶ್ವದ ಹಲವು ದೇಶಗಳಿಗೆ ವ್ಯಾಪಿಸುವುದರೊಂದಿಗೆ ಕ್ರೀಡಾ ಚಟುವಟಿಕೆಗಳಿಗೂ ಭಾರಿ ಪೆಟ್ಟು ಬಿದ್ದಿದೆ. ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ಗೂ ಇದೀಗ ಕರೊನಾ ಭಯ ಶುರುವಾಗಿದೆ. ಮಾಸಾಂತ್ಯದಲ್ಲಿ ಆರಂಭಗೊಳ್ಳಲಿರುವ 60 ದಿನಗಳ ಟೂರ್ನಿಯನ್ನು ವೈರಸ್ ತೊಂದರೆ ಎದುರಾಗದಂತೆ ಸಂಘಟಿಸುವ ದೊಡ್ಡ ಸವಾಲು ಬಿಸಿಸಿಐ ಮುಂದಿದೆ. ಹಾಲಿ ಆರೋಗ್ಯ ವಿಷಮಸ್ಥಿತಿಯ ಸಮಯದಲ್ಲಿ ಕೇಂದ್ರ ಸರ್ಕಾರ ನೀಡುವ ಸೂಚನೆಯಂತೆ ಬಿಸಿಸಿಐ ನಡೆದುಕೊಳ್ಳುವ ಅಗತ್ಯವೂ ಇದೆ.
ವಿಶ್ವದೆಲ್ಲೆಡೆ ಕೊರೊನಾ ವೈರಸ್ಗೆ 3,500ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಸದ್ಯಕ್ಕೆ ಐಪಿಎಲ್ಗೆ ರದ್ದಾಗುವ ಅಥವಾ ಮುಂದೂಡಲ್ಪಡುವ ಅಪಾಯ ಇಲ್ಲ. ನಿಗದಿಯಂತೆಯೇ ಐಪಿಎಲ್ ನಡೆಯುವ ಬಗ್ಗೆಯೂ ಯಾವುದೇ ಗೊಂದಲಗಳಿಲ್ಲ. ಗುರುವಾರವರೆಗೆ ಭಾರತದಲ್ಲಿ 30 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣದಿದ್ದರೆ ಐಪಿಎಲ್ಗೂ ಯಾವುದೇ ಭೀತಿ ಇರುವುದಿಲ್ಲ.
ಐಪಿಎಲ್ನಲ್ಲಿ 60 ವಿದೇಶಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಕರೊನಾ ಪ್ರಕರಣಗಳು ಪತ್ತೆಯಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಕೆರಿಬಿಯನ್ ದ್ವೀಪರಾಷ್ಟ್ರಗಳಿಂದ ಈ ಆಟಗಾರರು ಆಗಮಿಸಲಿದ್ದಾರೆ.
‘ಟೋಕಿಯೊದಲ್ಲಿ ಒಲಿಂಪಿಕ್ಸ್ ಅನ್ನು ನಿಗದಿಯಂತೆಯೇ ನಡೆಸುವುದಾಗಿ ಐಒಸಿ ಹೇಳಿದೆ. ಒಲಿಂಪಿಕ್ಸ್ಗೆ ಹೋಲಿಸಿದರೆ ಐಪಿಎಲ್ ಸಣ್ಣಮಟ್ಟದ ಕ್ರೀಡಾಕೂಟ. ಕರೊನಾ ಭೀತಿಯ ನಡುವೆ ಒಲಿಂಪಿಕ್ಸ್ ಸಂಘಟಿಸಬಹುದಾದರೆ, ಐಪಿಎಲ್ ನಡೆಸದಿರುವುದಕ್ಕೆ ಕಾರಣಗಳೇ ಇಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಗ್ಯ ಸಂಬಂಧಿಸಿ ಸರ್ಕಾರ ನೀಡುವ ಎಲ್ಲ ಸೂಚನೆಗಳನ್ನು ಮಂಡಳಿ ಚಾಚೂತಪ್ಪದೆ ಪಾಲಿಸಲಿದೆ ಎಂದೂ ಹೇಳಿದ್ದಾರೆ.
ಮುಂದೂಡಿಕೆ ಸಾಧ್ಯವಿಲ್ಲ: ಒಂದು ವೇಳೆ ಕರೊನಾ ಭಯ ಹೆಚ್ಚಾದರೆ ಐಪಿಎಲ್ ರದ್ದುಗೊಳಿಸಬಹುದಷ್ಟೇ. ಮುಂದೂಡಿಕೆ ಸಾಧ್ಯವಿಲ್ಲ. ಯಾಕೆಂದರೆ ಐಸಿಸಿ ಕ್ಯಾಲೆಂಡರ್ ಪ್ರಕಾರ ಏಪ್ರಿಲ್-ಮೇನಲ್ಲಿ ಮಾತ್ರ ಐಪಿಎಲ್ ನಡೆಸಲು ಅವಕಾಶವಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಪ್ರೇಕ್ಷಕರ ಕೊರತೆ ಕಾಡಬಹುದೇ?: ಕೊರೊನಾ ಹರಡುವುದನ್ನು ತಡೆಯಲು ಜನರು ದೊಡ್ಡ ಗುಂಪುಗಳಲ್ಲಿ ಸೇರುವುದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು ಎಂದು ತಜ್ಞರು ಈಗಾಗಲೆ ಸೂಚಿಸಿದ್ದಾರೆ. ಇದರಿಂದಾಗಿ ಐಪಿಎಲ್ಗೆ ಪ್ರೇಕ್ಷಕರ ಕೊರತೆ ಕಾಡಬಹುದೇ ಎಂಬ ಆತಂಕವೂ ಎದುರಾಗಿದೆ. ಆದರೆ ಇದು ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭಗೊಂಡ ಸಮಯದಲ್ಲಷ್ಟೇ ಗೊತ್ತಾಗಬಹುದು ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. -ಪಿಟಿಐ
ರದ್ದಾದರೆ ನಷ್ಟ ತಡೆಯಲಿದೆ ವಿಮೆ!
ಒಂದು ವೇಳೆ ಐಪಿಎಲ್ ನಡೆಯದಿದ್ದರೆ ಬಿಸಿಸಿಐ ದೊಡ್ಡ ಪ್ರಮಾಣದ ನಷ್ಟವನ್ನೇನೂ ಎದುರಿಸುವುದಿಲ್ಲ. ಇದಕ್ಕೆ ಕಾರಣ ವಿಮೆ. ಐಪಿಎಲ್ನ ಪ್ರತಿ ಪಂದ್ಯಕ್ಕೂ ಬಿಸಿಸಿಐ ವಿಮೆ ಮಾಡಿಸುತ್ತದೆ. ಹೀಗಾಗಿ ಶೇ. 100ರಷ್ಟು ಅಲ್ಲದಿದ್ದರೂ, ಶೇ. 80ರಷ್ಟು ಆದಾಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಟೂರ್ನಿ ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 5 ವರ್ಷಗಳ ಅವಧಿಗೆ 16,347 ಕೋಟಿ ರೂ.ಗಳಿಗೆ ಐಪಿಎಲ್ ಪ್ರಸಾರ ಹಕ್ಕು ಪಡೆದುಕೊಂಡಿದ್ದು, ಜಾಹೀರಾತುಗಳಿಂದಲೇ ದೊಡ್ಡ ಆದಾಯ ನಿರೀಕ್ಷಿಸುತ್ತಿದೆ.
ಕಿವೀಸ್ ಕ್ರಿಕೆಟಿಗರಿಗೆ ಎಚ್ಚರಿಕೆ
ಕರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (ಎನ್ರೆಡ್ಸಿ) ತನ್ನ ಗುತ್ತಿಗೆಯ ಕ್ರಿಕೆಟಿಗರಿಗೆ ಸೂಚನೆ ನೀಡಿದೆ. ಐಪಿಎಲ್ನಲ್ಲಿ ಆಡಲಿರುವ ಆರು ಕ್ರಿಕೆಟಿಗರೂ ಇದರಲ್ಲಿ ಒಳಗೊಂಡಿದ್ದಾರೆ. ಅವರೆಂದರೆ ನೀಶಾಮ್ (ಪಂಜಾಬ್), ಫರ್ಗ್ಯುಸನ್ (ಕೆಕೆಆರ್), ಮೆಕ್ಲೀನಘನ್, ಬೌಲ್ಟ್ (ಮುಂಬೈ), ವಿಲಿಯಮ್ಸನ್ (ಸನ್ರೈಸರ್ಸ್) ಮತ್ತು ಮಿಚೆಲ್ ಸ್ಯಾಂಟ್ನರ್ (ಸಿಎಸ್ಕೆ). ಶ್ರೀಲಂಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಈಗಾಗಲೆ ಹ್ಯಾಂಡ್ ಶೇಕ್ ಮಾಡುವುದಿಲ್ಲ ಎಂದು ಹೇಳಿಕೊಂಡಿದೆ.
ಹ್ಯಾಂಡ್ ಶೇಕ್ ಬೇಡ ಕ್ರೀಡಾ ಸಚಿವರ ಸೂಚನೆ
ಕೊರೊನಾ ವೈರಸ್ ಅಪಾಯದಿಂದ ಪಾರಾಗಲು ದೇಶದ ಕ್ರೀಡಾಪಟುಗಳು ಹ್ಯಾಂಡ್ ಶೇಕ್ಗಳಿಂದ ದೂರವಿರಿ, ಪರಸ್ಪರ ಅಪ್ಪಿಕೊಳ್ಳಬೇಡಿ ಮತ್ತು ಜನರೊಂದಿಗೆ ಬೆರೆಯುವಾಗ ಸಾಧ್ಯವಾದಷ್ಟು ಸ್ಪರ್ಶ ತಪ್ಪಿಸಿಕೊಳ್ಳಿ. ಸಾಂಪ್ರದಾಯಿಕ ನಮಸ್ತೆ, ಸಲಾಂ, ಜೈ ಹಿಂದ್ ಮತ್ತು ಸ್ಥಳೀಯ ಪದದ ಬಳಕೆಯೊಂದಿಗೆ ವ್ಯವಹರಿಸಿ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಲಹೆ ನೀಡಿದ್ದಾರೆ. ಕ್ರೀಡಾಪಟುಗಳ ಆರೋಗ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕು. ವಿದೇಶಿ ಟೂರ್ನಿ, ತರಬೇತಿಯ ಬಗ್ಗೆ ಯೋಜನೆ ರೂಪಿಸುವಾಗ ಎಚ್ಚರಿಕೆಯಿಂದ ಇರಿ ಎಂದು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (ಸಾಯ್) ಈಗಾಗಲೆ ಸೂಚನೆ ನೀಡಿದೆ.
ಇಟಲಿಯಲ್ಲಿ ಕ್ರೀಡೆಯಿಂದ ಪ್ರೇಕ್ಷಕರಿಗೆ ನಿರ್ಬಂಧ
ರೋಮ್ ಕೊರೊನಾ ವೈರಸ್ನಿಂದ ತತ್ತರಿಸಿರುವ ಇಟಲಿಯಲ್ಲಿ ಏಪ್ರಿಲ್ 3ರವರೆಗೆ ಎಲ್ಲ ಕ್ರೀಡಾ ಚಟವಟಿಕೆಗಳಿಗೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದೆ. ಎಲ್ಲ ಪಂದ್ಯಗಳನ್ನು ಮುಚ್ಚಿದ ಮೈದಾನದಲ್ಲೇ ನಡೆಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಇಟಲಿಯಲ್ಲಿ ಇದುವರೆಗೆ 3 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣ ಪತ್ತೆಯಾಗಿದ್ದು, 107 ಮಂದಿ ಬಲಿಯಾಗಿದ್ದಾರೆ. ಈ ವಾರದ ಇಟಾಲಿಯನ್ ಕಪ್ ಪಂದ್ಯಗಳೂ ಮುಂದೂಡಿಕೆಯಾಗಿವೆ. ಇಟಲಿ-ದಕ್ಷಿಣ ಕೊರಿಯಾ ನಡುವಿನ ಡೇವಿಸ್ ಕಪ್ ಪಂದ್ಯವೂ ಪ್ರೇಕ್ಷಕರಿಲ್ಲದೆ ನಡೆಯಲಿದೆ.