ಬೆಂಗಳೂರು: ಕೊರೊನಾ ವೈರಸ್ ಸೋಂಕು ಎಲ್ಲದರ ಮೇಲೂ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ. ಷೇರುಪೇಟೆಯಲ್ಲಿ ಬ್ಲಡ್ ಬಾತ್ ಕಂಡುಬಂದರೆ, ವ್ಯಕ್ತಿಗತ ಜೀವನದ ಮೇಲೂ ಅಂಥದ್ದೇ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿದೆ.
ಷೇರುಪೇಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಮಾರಾಟ ಹೆಚ್ಚಿಸಿಕೊಂಡರೆ, ಜೀವ ವಿಮಾ ಕಂಪನಿಗಳು ಲೈಫ್ ಇನ್ಶೂರೆನ್ಸ್ ಇಶ್ಯೂ ಮಾಡಲು ಇದೀಗ ನಿಬಂಧನೆ ಹಾಕಲು ಚಿಂತನೆ ನಡೆಸಿವೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ನಿಬಂಧನೆಗಳನ್ನೂ ಅಂತಿಮಗೊಳಿಸಲಾಗಿದೆ. ಇನ್ನೊಂದು ಎರಡು ಮೂರು ದಿನಗಳ ಒಳಗೆ ಇದಕ್ಕೆ ಸಂಬಂಧಿಸಿದ ಪ್ರಕಟಣೆಗಳನ್ನು ಆಯಾ ಕಂಪನಿಗಳು ಪ್ರಕಟಿಸಲಿವೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಇಂಡೋನೇಷ್ಯಾ, ಜಪಾನ್, ಲಾವೋಸ್, ಮಲೇಷ್ಯಾ, ಫಿಲಿಪ್ಪೀನ್ಸ್, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಮ್ಯಾನ್ಮಾರ್, ಕಾಂಬೋಡಿಯಾ, ಬ್ರೂನೈ, ತಿಮೋರ್ ಲೆಸ್ಟೆಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಅಥವಾ ನೆಲೆಸಿರುವ ಭಾರತೀಯರಿಗೆ ಮುಂದಿನ ಆದೇಶದ ತನಕ ಲೈಫ್ ಇನ್ಶೂರೆನ್ಸ್ ಕವರ್ ಹೊಸದಾಗಿ ನೀಡದಿರಲು ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳು ತೀರ್ಮಾನಿಸಿವೆ.
ಅದೇ ರೀತಿ, ಚೀನಾ ಮತ್ತು ಆಗ್ನೇಯ ಏಷ್ಯಾ ದೇಶಗಳಿಗೆ ಭಾರತೀಯರು ಯಾರಾದರೂ ಪ್ರವಾಸ ತೆರಳಿದ್ದು ಹಿಂದಿರುಗಿದ್ದರೆ, ಹಿಂದಿರುಗಿದ ದಿನಾಂಕದಿಂದ ಎರಡು ತಿಂಗಳ ಕಾಲಾವಧಿಗೆ ಹೊಸದಾಗಿ ಜೀವ ವಿಮಾ ಸೌಲಭ್ಯ ಸಿಗಲಾರದು. ಅದಾದ ನಂತರದಲ್ಲಿ ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕ ಅಂಥವರು ಹೊಸ ಜೀವ ವಿಮೆ ಖರೀದಿಸಬಹುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.