ಲಿಂಗಸುಗೂರು: ತಾಲೂಕಾದ್ಯಂತ ಕರೊನಾ ವೈರಸ್ ಸೋಂಕು ಶಂಕಿತರ ಕುಟುಂಬಗಳ ಮೇಲೆ ತಾಲೂಕು ಆಡಳಿತ ತೀವ್ರ ನಿಗಾವಹಿಸಿ, ಅವರು ಪ್ರತ್ಯೇಕ ವಾಸಿಸಲು ವಸತಿ ನಿಲಯವೊಂದು ನಿಗದಿಪಡಿಸಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ತಾಲೂಕಿನಲ್ಲಿ ಈವರೆಗೆ 15 ಶಂಕಿತರ ಮೇಲೆ ನಿಗಾವಹಿಸಲಾಗಿದೆ. ನಗರ ಪ್ರದೇಶಗಳಿಗೆ ಗುಳೆ ಹೋದ ಜನರು ಮರಳಿ ತವರಿಗೆ ಬರುತ್ತಿದ್ದು, ಅವರ ಮೇಲೂ ಕೂಡ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದ್ದು, ಪುರಸಭೆ ವ್ಯಾಪ್ತಿಯ ಕರಡಕಲ್ ಹತ್ತಿರದ ನೂತನ ವಸತಿ ನಿಲಯದಲ್ಲಿ ಕರೊನಾ ಶಂಕಿತ ಕುಟುಂಬಗಳ ವಾಸಕ್ಕಾಗಿ ಸ್ಥಳ ನಿಗದಿ ಪಡಿಸಲಾಗಿದೆ. ಅವರಿಗೆ ವೈದ್ಯಕೀಯ ಸೌಲತ್ತು ಒದಗಿಸಲು ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಸಂಜೆ ಎಸಿ ರಾಜಶೇಖರ ಡಂಬಳ, ತಹಸೀಲ್ದಾರ್ ಚಾಮರಾಜ ಪಾಟೀಲ್, ಟಿಎಚ್‌ಒ ರುದ್ರಗೌಡ ಪಾಟೀಲ್, ತಾಪಂ ಇಒ ಪಂಪಾಪತಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ ಸೇರಿ ಇತರರು ವಸತಿ ನಿಲಯ ಪರಿಶೀಲನೆ ನಡೆಸಿದರು.