ಮಂಗಳೂರು: ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದ ಲಾಕ್‌ಡೌನ್‌ನಿಂದ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಇತ್ತೀಚಿನ ಕೆಲವು ಸಮಯಗಳಿಂದ ಚೇತರಿಸಿಕೊಳ್ಳುತ್ತಿತ್ತು. ಆದರೆ ಪ್ರಸಕ್ತ ಎರಡನೇ ಅಲೆ ವಕ್ಕರಿಸಿರುವುದರಿಂದ ಈ ಕ್ಷೇತ್ರಕ್ಕೆ ಮತ್ತೆ ಹೊಡೆತ ಬೀಳುತ್ತಿದೆ.
ಕರೊನಾ ಎರಡನೇ ಅಲೆ ತಡೆಗೆ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ಕುಳಿತು ತಿಂಡಿ, ಊಟ ಸೇವಿಸುವಂತಿಲ್ಲ. ಪಾರ್ಸೆಲ್‌ಗೆ ಮಾತ್ರ ಅವಕಾಶ. ಇದರಿಂದ ವ್ಯಾಪಾರಕ್ಕೆ ಶೇ.60ರಷ್ಟು ಹೊಡೆತ ಬೀಳಲಿದೆ. ಈ ಉದ್ಯಮ ನೆಚ್ಚಿಕೊಂಡಿರುವವರು ತೀವ್ರ ನಷ್ಟ ಅನುಭವಿಸುವುದು ಖಚಿತ.
ಕಳೆದ ಲಾಕ್‌ಡೌನ್ ಸಂದರ್ಭ ಮುಚ್ಚಲ್ಪಟ್ಟ ಹೋಟೆಲ್‌ಗಳ ಪೈಕಿ ಹಲವು ಬಾಗಿಲು ತೆರೆಯಲೇ ಇಲ್ಲ. ಹೋಟೆಲ್ ನಿರ್ವಹಣೆ ವೆಚ್ಚ ಅಧಿಕವಾಗಿದ್ದು ಉತ್ತಮ ವ್ಯಾಪಾರ ನಡೆದರೆ ಮಾತ್ರ ಲಾಭದಾಯಕ ಎನ್ನುತ್ತಾರೆ ಹೋಟೆಲ್ ಉದ್ಯಮಿ ಕಿರಣ್.
ಉದ್ಯೋಗ ಕಡಿತ: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರ ಉದ್ಯೋಗಕ್ಕೂ ಕುತ್ತು ಬೀಳಲಿದೆ. ಗ್ರಾಹಕರು ಹೋಟೆಲ್‌ಗಳಿಗೆ ಬಾರದಿದ್ದರೆ ಅಲ್ಲಿ ಸಪ್ಲಾಯರ್ಸ್, ಕ್ಲೀನರ್ಸ್‌ಗಳಿಗೆ ಕೆಲಸವಿಲ್ಲ. ಮಾಲೀಕರು ಕೂಡ ವ್ಯಾಪಾರ ಇಲ್ಲದೆ ಹೆಚ್ಚಿನ ಸಿಬ್ಬಂದಿ ಇಟ್ಟುಕೊಳ್ಳುವುದಿಲ್ಲ. ಇಂಥ ಕೆಲಸಗಾರರು ತಮ್ಮ ಕುಟುಂಬ ಸಲಹಲು ಪರದಾಡುವ ಪರಿಸ್ಥಿತಿ ಮತ್ತೊಮ್ಮೆ ಬರಲಿದೆ.
ಕರಾವಳಿ ಭಾಗ ಹೋಟೆಲ್ ಉದ್ಯಮಕ್ಕೆ ಪ್ರಸಿದ್ಧಿ ಪಡೆದ ಜಿಲ್ಲೆ. ಅದರೆ ಕರೊನಾ ಬಳಿಕ ಈ ಕ್ಷೇತ್ರ ಬಹುತೇಕ ನೆಲಕಚ್ಚಿದೆ. ಮುಂಬೈ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಕರಾವಳಿಗರು ಹೋಟೆಲ್‌ಗಳನ್ನು ತೆರೆದು ಉತ್ತಮವಾಗಿ ಮುನ್ನಡೆಸುತ್ತಿದ್ದರು. ಆದರೆ ಈ ಒಂದು ವರ್ಷದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿಕೊಂಡವರು ಕಟ್ಟಲಾಗದೆ ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ ಎನ್ನುವುದು ಗಮನಾರ್ಹ ಅಂಶ.
ಪಾರ್ಸೆಲ್ ಎಲ್ಲರಿಗೂ ಹಿತವಲ್ಲ: ಕಚೇರಿ, ಫ್ಯಾಕ್ಟರಿಗಳಲ್ಲಿ, ಬಸ್, ಆಟೋ, ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುವವರು ಪ್ರತಿದಿನ ಹೋಟೆಲ್‌ಗೆ ಹೋಗಿ ಊಟ, ತಿಂಡಿ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಅವರಿಗೆ ಪಾರ್ಸೆಲ್ ಕೊಂಡೊಯ್ದು ಹೊರಗಡೆ ತಿನ್ನಲು ಸರಿ ಬರುವುದಿಲ್ಲ. ಇದರಿಂದ ಸಮಸ್ಯೆ ಎದುರಿಸುವಂತಾಗುತ್ತದೆ. ಮಹಿಳೆಯರಿಗೆ ಇನ್ನೂ ಕಷ್ಟದ ಪರಿಸ್ಥಿತಿ. ವಾರಾಂತ್ಯದಲ್ಲಿ ಎರಡು ದಿನ ಕರ್ಫ್ಯೂ ಘೋಷಣೆ ಮಾಡಿದ್ದರಿಂದ ನಗರ ಪ್ರದೇಶಗಳಲ್ಲಿ ಉದ್ಯೋಗದಲ್ಲಿರುವ ಹೊರರಾಜ್ಯ, ಜಿಲ್ಲೆಯ ಬ್ಯಾಚುಲರ್‌ಗಳು ತಿಂಡಿ, ಊಟಕ್ಕೆ ಹೋಟೆಲ್‌ಗಳನ್ನೇ ನೆಚ್ಚಿಕೊಂಡಿರುತ್ತಾರೆ. ಹೋಟೆಲ್‌ಗಳು ವಾರಾಂತ್ಯ ಪೂರ್ಣ ಬಂದ್ ಆಗುವುದರಿಂದ ಬಿಸ್ಕಿಟ್, ಹಣ್ಣು ತಿಂದು ದಿನ ದೂಡಬೇಕಾದ ಸ್ಥಿತಿ ಬರಬಹುದು. ಕಳೆದ ಬಾರಿ ಲಾಕ್‌ಡೌನ್ ಸಂದರ್ಭ ಊರಿಗೆ ಹೋಗಲಾಗದೆ ಬಾಕಿಯಾಗಿದ್ದ ಇಂಥ ಬ್ಯಾಚುಲರ್‌ಗಳು ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸಿದ್ದು ಎಲ್ಲರಿಗೂ ತಿಳಿದಿದೆ.
ಮಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಇನ್ನು 15 ದಿನ ಕೆಲಸ ಇಲ್ಲದಂತಾಗಿದೆ. ಮಾಲೀಕರು ವೇತನ ನೀಡದಿದ್ದರೆ ಜೀವನ ನಿರ್ವಹಣೆ ಕಷ್ಟ. ಕಳೆದ ವರ್ಷ ತೀವ್ರ ಸಂಕಷ್ಟ ಎದುರಿಸಿದ್ದೆವು. ಲಾಕ್‌ಡೌನ್‌ನಿಂದ ನಮ್ಮಂಥ ಕಾರ್ಮಿಕರ ಜೀವನಕ್ಕೆ ಹೊಡೆತ ಬೀಳುತ್ತಿದೆ. ಆದರೆ ಕರೊನಾ ನಿಯಂತ್ರಣಕ್ಕೆ ಸರ್ಕಾರ ಮಾಡಿರುವ ನಿಯಮವನ್ನೂ ಪಾಲಿಸಲೇಬೇಕಿದೆ.
ಗಣೇಶ್
ಹೋಟೆಲ್ ಸಪ್ಲಾಯರ್ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಊಟ, ತಿಂಡಿಗೆ ಹೋಟೆಲ್‌ಗೆ ಹೋಗುವುದನ್ನು ರೂಢಿಸಿಕೊಂಡಿದ್ದೇನೆ. ವಾರಾಂತ್ಯ ಲಾಕ್‌ಡೌನ್ ಆಗುವುದರಿಂದ ಸಮಸ್ಯೆಯಾಗಲಿದೆ. ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.
ಹರಿಪ್ರಸಾದ್
ಖಾಸಗಿ ಕಂಪನಿ ಉದ್ಯೋಗಿಹೋಟೆಲ್ನವರಿಗೆ ವ್ಯಾಪಾರ ಇರುವುದೇ ಶನಿವಾರ ಹಾಗೂ ಭಾನುವಾರ. ಈ ಎರಡು ದಿನ ಲಾಕ್‌ಡೌನ್ ಮಾಡಿರುವುದರಿಂದ ದೊಡ್ಡ ಹೊಡೆತ ಬೀಳಲಿದೆ. ಮಂಗಳೂರು ನಗರದಲ್ಲಿ ಪಾರ್ಸೆಲ್ ಕೊಂಡೊಯ್ಯುವವರ ಸಂಖ್ಯೆ ಕಡಿಮೆ. ಆದ್ದರಿಂದ ಒಟ್ಟು ವ್ಯವಹಾರಕ್ಕೆ ನಷ್ಟ. ಕಳೆದ ವರ್ಷದ ಲಾಕ್‌ಡೌನ್ ಬಳಿಕ ಬಹಳಷ್ಟು ಹೋಟೆಲ್‌ಗಳು ತೆರೆಯಲೇ ಇಲ್ಲ. ಮತ್ತೆ ಒಂದಷ್ಟು ಹೋಟೆಲ್‌ಗಳು ಮುಚ್ಚುವ ಸ್ಥಿತಿಯಲ್ಲಿವೆ.
ಕುಡ್ಪಿ ಜಗದೀಶ್ ಶೆಣೈ
ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ