ಬೈಲಹೊಂಗಲ: ಮಹಾಮಾರಿ ಕರೊನಾ ಸೋಂಕು ತಡೆಯಲು, ಜನರ ಆರೋಗ್ಯದ ದೃಷ್ಟಿಯಿಂದ ಜಗದೀಶ ಮೆಟಗುಡ್ಡ ಅಭಿಮಾನಿಗಳ ವತಿಯಿಂದ ಮತಕ್ಷೇತ್ರದಾದ್ಯಂತ 50 ಸಾವಿರ ಮಾಸ್ಕ್, 5 ಸಾವಿರ ಸ್ಯಾನಿಟೈಜರ್ ಬಾಟಲ್‌ಗಳನ್ನು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿಮಾನಿಗಳ ವತಿಯಿಂದ ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ಮಾಸ್ಕ್, 200 ಸ್ಯಾನಿಟೈಜರ್ ಬಾಟಲ್‌ಗಳನ್ನು ಆರೋಗ್ಯ ಇಲಾಖೆಗೆ ಗುರುವಾರ ಹಸ್ತಾಂತರಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ಬರದೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೊನಾ ವೈರಸ್ ಹಾವಳಿ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಜನತೆಯ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಅಭಿಮಾನಿ ಬಳಗದವರು ಈ ಕಾರ್ಯ ಕೈಗೊಂಡಿದ್ದಾರೆ. ನಮ್ಮ ಆರೋಗ್ಯ ರಕ್ಷಿಸಿಕೊಳ್ಳುತ್ತ ಇತರರ ಆರೋಗ್ಯವನ್ನೂ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಎಸ್.ಎಸ್. ಸಿದ್ದಣ್ಣವರ, ಉದ್ಯಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಆನಿಗೋಳ ಪಿಕೆಪಿಎಸ್ ಅಧ್ಯಕ್ಷ ಸುನೀಲ ಮರಕುಂಬಿ, ಪ್ರಫುಲ್ ಪಾಟೀಲ, ಸಂತೋಷ ಹಡಪದ, ಆನಂದ ಏಣಗಿ, ಮಲ್ಲು ಮತ್ತಿಕೊಪ್ಪ ಹಾಗೂ ಅಭಿಮಾನಿ ಬಳಗದವರು ಇದ್ದರು.