More

    ವಾರದಲ್ಲಿ ಶೇ.58 ಸೋಂಕು ಹೆಚ್ಚಳ; ಏ.11ಕ್ಕೆ ಶೇ.7.72 ಇದ್ದ ಸೋಂಕು ದರ ಇದೀಗ ಶೇ.12.20ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಶನಿವಾರ 17,489 ಹೊಸ ಕರೊನಾ ಸೋಂಕಿತರು ಪತ್ತೆಯಾಗಿದ್ದರೆ, 80 ಸೋಂಕಿತರು ಮೃತಪಟ್ಟಿದ್ದಾರೆ. ಕರೊನಾ ಎರಡನೇ ಅಲೆ ಹೆಚ್ಚಳವಾಗುತ್ತಿರುವುದಕ್ಕೆ ಪುರಾವೆಯೆಂಬಂತೆ ಕಳೆದೊಂದು ವಾರದಲ್ಲಿ ಸೋಂಕು ದರ ಶೇ.58 ಏರಿಕೆ ಕಂಡಿದೆ. ಪ್ರತಿ ನೂರು ಪರೀಕ್ಷೆಯಲ್ಲಿ ಎಷ್ಟು ಜನರಿಗೆ ಸೋಂಕು ದೃಢಪಡುತ್ತದೆ ಎಂಬುದನ್ನು ಸೋಂಕು ದರ ಎನ್ನಲಾಗುತ್ತದೆ. ಏ.11ರಂದು ಆರೋಗ್ಯ ಇಲಾಖೆ ನೀಡಿದ ವರದಿ ಪ್ರಕಾರ, ರಾಜ್ಯದಲ್ಲಿ ಸೋಂಕು ದರ ಶೇ.7.72 ಇತ್ತು. ನಂತರದ ದಿನಗಳಲ್ಲಿ ಕ್ರಮವಾಗಿ ಶೇ.8.24, ಶೇ.7.20, ಶೇ.9.94, ಶೇ.11.38, ಶೇ.11.11 ಆಗಿ ಶನಿವಾರ ಶೇ.12.20 ಆಗಿದೆ. ಅಂದರೆ, ಸಮುದಾಯದಲ್ಲಿ ಹೆಚ್ಚಿನ ಜನರಲ್ಲಿ ಸೋಂಕು ಹರಡಿದೆ ಎಂಬುದನ್ನು ಇದು ದೃಢಪಡಿಸುತ್ತದೆ.

    ಇದೇ ವೇಳೆ, ಮರಣ ದರದಲ್ಲೂ ಏರಿಕೆ ದಾಖಲಾಗಿದೆಯಾದರೂ ಸೋಂಕಿನ ದರದಷ್ಟಿಲ್ಲ. ಏ.11ರಂದು ಶೇ.0.45 ಇದ್ದ ಸಾವಿನ ದರ ನಂತರದಲ್ಲಿ ಶೇ.0.54, ಶೇ.0.76, ಶೇ.0.33, ಶೇ.0.44, ಶೇ.0.52 ಹಾಗೂ ಶನಿವಾರ ಶೇ.0.45 ಆಗಿದೆ. ಮರಣ ದರದಲ್ಲಿ ಏರಿಳಿಕೆ ದಾಖಲಾಗಿದೆ. ಶನಿವಾರ 5,565 ಮಂದಿ ಗುಣಮುಖರಾಗಿದ್ದು, ಒಟ್ಟು ಚೇತರಿಕೆ ಸಂಖ್ಯೆ 10.09 ಲಕ್ಷವಾಗಿದೆ. ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 11.41 ಲಕ್ಷ ಹಾಗೂ ಮೃತರ ಸಂಖ್ಯೆ 13,270 ಆಗಿದೆ. ಒಟ್ಟು ಸೋಂಕಿತರಲ್ಲಿ ಶೇ.65ರಷ್ಟು ಅಂದರೆ 11,404 ರಾಜಧಾನಿ ಬೆಂಗಳೂರಿನಲ್ಲೇ ದಾಖಲಾಗಿದ್ದು, ಕರೊನಾ ಹಾಟ್​ಸ್ಪಾಟ್ ಆಗಿ ಮುಂದುವರಿದಿದೆ. ಬೆಂಗಳೂರಿನಲ್ಲಿ 43 ಸೋಂಕಿತರು ಮೃತಪಟ್ಟಿದ್ದಾರೆ, 87,724 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಿನ ನಂತರ ಮೈಸೂರು (811), ಕಲಬುರಗಿ (560), ತುಮಕೂರು (507) ಜಿಲ್ಲೆಗಳಿವೆ. ಒಟ್ಟು 589 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರಿನಲ್ಲೇ ಅತಿ ಹೆಚ್ಚು (124) ಜನರಿದ್ದಾರೆ.

    ಹಾಟ್​ಸ್ಟಾಟ್​ಗಳಲ್ಲಿ ಹೆಚ್ಚಿದ ಅಪಾಯ

    ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ, ಮಿರಜ್, ಪುಣೆ, ನಾಸಿಕ, ಸೊಲ್ಲಾಪುರ, ನಾಗಪುರ, ಪಿಂಪ್ರಿ ಸೇರಿ ವಿವಿಧ ಭಾಗಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಕರೊನಾ 2ನೇ ಅಲೆ ತೀವ್ರಗೊಳ್ಳುತ್ತಿದೆ. ಈ ಮಧ್ಯೆ ಸೋಂಕಿತ ಪ್ರದೇಶಗಳದಿಂದ ಗಡಿ ಮೂಲಕ ಜಿಲ್ಲೆಗೆ ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಹೊರಗಿನಿಂದ ಬರುತ್ತಿರುವ ಜನರು ನಗರದ ಹಾಟ್​ಸ್ಪಾಟ್​ಗಳಾದ ವಿಮಾನ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ರಸ್ತೆಗಳು, ಹೋಟೆಲ್​ಗಳು, ವಾಣಿಜ್ಯ ಮಳಿಗೆಗಳಲ್ಲಿ ಸ್ಥಳೀಯ ರೊಂದಿಗೆ ಎಗ್ಗಿಲ್ಲದೆ ಓಡಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಬರುವವರಿಗೆ ಆರೋಗ್ಯ ತಪಾಸಣೆಯೂ ನಡೆಯುತ್ತಿಲ್ಲ. ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿ ಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ಸರ್ಕಾರಗಳಿಗೆ ಗಂಭೀರತೆಯೇ ಇಲ್ಲ: ಆಂತರಿಕ ಭಿನ್ನಮತದಲ್ಲಿ ಬಳಲುತ್ತಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಕರೊನಾ ಸೋಂಕಿನ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರ ಆರೋಗ್ಯವನ್ನು ಬಲಿ ಕೊಡುತ್ತಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಅಲೆ ಅನುಭವದಿಂದ ಪಾಠ ಕಲಿತು, ಎರಡನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಸೋಂಕಿತರಿಗೆ ಅಗತ್ಯವಾಗಿರುವ ರೆಮಿಡಿಸಿವಿರ್ ಚುಚ್ಚುಮದ್ದು ದಾಸ್ತಾನು ಇಲ್ಲದಂತಾಗಿದೆ. ಮಾಮೂಲಿ ಹಾಗೂ ಐಸಿಯು ಹಾಸಿಗೆಗಳು ಇಲ್ಲ. ಆಕ್ಸಿಜನ್ ಇಲ್ಲದೆ ರೋಗಿಗಳು ನರಳುವಂತಾಗಿದೆ ಎಂದು ಟೀಕಿಸಿದ್ದಾರೆ.

    ಶಕ್ತಿಸೌಧಕ್ಕೆ ಪ್ರವೇಶ ನಿರ್ಬಂಧ: ಕರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವುದರಿಂದ ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಸಭೆಗಳು ಬೇಡ: ಆದಷ್ಟು ಸಭೆಗಳನ್ನು ನಡೆಸದಿರುವಂತೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಎಲ್ಲ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಒಂದೆರಡು ತಿಂಗಳ ಕಾಲ ಸಭೆಗಳನ್ನು ವರ್ಚುವಲ್ ಆಗಿಯೇ ನಡೆಸುವುದು ಉತ್ತಮ. ಅನಿವಾರ್ಯವಾಗಿ ನಡೆಸಲೇಬೇಕಾದ ಸಭೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕೆಂದು ಸ್ಪಷ್ಟಪಡಿಸಿದ್ದಾರೆ.

    ವಿಂಧ್ಯಗಿರಿ, ಚಂದ್ರಗಿರಿ ಬಂದ್: ಇತಿಹಾಸ ಪ್ರಸಿದ್ಧ ಜೈನಕಾಶಿ ಶ್ರವಣಬೆಳಗೊಳದ ವಿಂಧ್ಯಗಿರಿ ಹಾಗೂ ಚಂದ್ರಗಿರಿಗೆ ಮೇ 15ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದ್ದು, ಶ್ರವಣಬೆಳಗೊಳದಲ್ಲಿ ಏ.25ರಂದು ಆಯೋಜಿಸಿದ್ದ ಮಹಾವೀರ ಜಯಂತಿ ಹಾಗೂ ಏ.27ರಂದು ನಡೆಯಬೇಕಿದ್ದ ಪಂಚಕಲ್ಯಾಣ ನಿಮಿತ್ತದ ರಥೋತ್ಸವವನ್ನೂ ರದ್ದುಪಡಿಸಲಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಆಕ್ಸಿಜನ್ ಕೊರತೆ ಇಲ್ಲ: ಕರೊನಾ ಎರಡನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಜಕ್ಕೂ ಆಕ್ಸಿಜನ್ ಕೊರತೆ ಇದೆಯೇ? ಇಂತಹದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆ ಇಲ್ಲ ಎಂಬುದು ಆರೋಗ್ಯ ಇಲಾಖೆ ಮೂಲಗಳ ಅಭಿಪ್ರಾಯವಾಗಿದೆ. ರಾಜ್ಯದಲ್ಲಿ ಒಟ್ಟಾರೆ ಆಕ್ಸಿಜನ್ ಉತ್ಪಾದನೆಯ ಸಾಮರ್ಥ್ಯ 800 ಮೆಟ್ರಿಕ್ ಟನ್ ಇದ್ದರೆ, ಸದ್ಯ ಬೇಡಿಕೆ ಇರುವುದು 260 ಮೆಟ್ರಿಕ್ ಟನ್​ಗೆ ಮಾತ್ರ. ಆದ್ದರಿಂದ ಕೊರತೆ ಉಂಟಾಗಲು ಸಾಧ್ಯವೇ ಇಲ್ಲವೆಂಬುದು ಮೂಲಗಳ ಸ್ಪಷ್ಟನೆ.

    ರೆಮ್​ಡಿಸಿವಿರ್ ಉತ್ಪಾದನೆ ದುಪ್ಪಟ್ಟು: ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್​ಸಿವಿರ್ ಚುಚ್ಚುಮದ್ದು ಅಭಾವಕ್ಕೆ ಕೇಂದ್ರ ಸರ್ಕಾರ ಮದ್ದು ಅರೆದ ಪರಿಣಾಮ, ವಾರದೊಳಗೆ ಬೇಡಿಕೆ ಮತ್ತು ಪೂರೈಕೆ ಸಮತೋಲನ ಸಾಧಿಸುವ ಸಾಧ್ಯತೆಗಳಿವೆ. ರೆಮ್​ಸಿವಿರ್ ಇಂಜಕ್ಷನ್ ಮಾಸಿಕ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ 38.8 ಲಕ್ಷ ಬಾಟಲಿ (ವೈಯಲ್ಸ್)ಗಳಾಗಿದ್ದು, ಹೆಚ್ಚುವರಿಯಾಗಿ 35.3 ಲಕ್ಷ ವೈಯಲ್ಸ್ ಉತ್ಪಾದನೆಗೆ ಅನುಮತಿ ನೀಡಿದೆ. ಇದರಿಂದಾಗಿ ಮಾಸಿಕ ಉತ್ಪಾದನೆ 74.10 ವೈಯಲ್ಸ್​ಗೆ ಏರಿಕೆಯಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಮಾಹಿತಿ ನೀಡಿದ್ದಾರೆ.ಅಮೆರಿಕದ ಗಿಲೀಡ್ ಸೈನ್ಸಸ್ ಕಂಪನಿ ಈ ಚುಚ್ಚುಮದ್ದಿನ ಸ್ವಾಮಿತ್ವ ಹೊಂದಿದ್ದು, ದೇಶದ 7 ಫಾರ್ವ ಕಂಪನಿಗಳು ಉತ್ಪಾದನೆಗೆ ಪರವಾನಗಿ ಪಡೆದಿವೆ. ರೆಮ್​ಸಿವಿರ್ ಉತ್ಪಾದನೆ ದ್ವಿಗುಣಗೊಳಿಸಿದ್ದು, ಸದ್ಯಕ್ಕೆ ಪ್ರತಿದಿನ 1.35 ಲಕ್ಷ ಬಾಟಲಿಗಳು ಉತ್ಪಾದನೆಯಾಗುತ್ತಿವೆ. ಅಲ್ಲದೆ, ಈ ಚುಚ್ಚುಮದ್ದು ರಫ್ತು ನಿಷೇಧಿಸಿರುವ ಕಾರಣ ಹೆಚ್ಚುವರಿಯಾಗಿ 4 ಲಕ್ಷ ವೈಯಲ್ಸ್ ಆಂತರಿಕ ಬಳಕೆಗೆ ಲಭ್ಯವಿದೆ ಎಂದು ವಿವರಿಸಿದ್ದಾರೆ.

    ಬೆಲೆಯೂ ಇಳಿಕೆ: ಬಳಕೆಯ ತುರ್ತು ಅಗತ್ಯ, ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿಯೇ ಈ ಚುಚ್ಚುಮದ್ದಿನ ಬೆಲೆಗಳನ್ನು ಅನೇಕ ಕಂಪನಿಗಳು ಇಳಿಸಿವೆ. ಹೀಗಾಗಿ ಬಳಕೆದಾರರಿಗೆ ಕನಿಷ್ಟವೆಂದರೂ 750 ಕೋಟಿ ರೂ. ಉಳಿತಾಯವಾಗಲಿದೆ ಎಂದು ಡಿವಿಎಸ್ ಹೇಳಿದ್ದಾರೆ. ಡಾ.ರೆಡ್ಡೀಸ್ ಕಂಪನಿಯು ತನ್ನ ರಮೈಕ್ ಬ್ರಾಂಡಿನ ರೆಮ್​ಸಿವಿರ್ ಬೆಲೆಯನ್ನು 2,800ರಿಂದ 899 ರೂ.ಗಳಿಗೆ ಇಳಿಸಿದೆ. ಹಾಗೆಯೇ ರೆಡಿಕ್ಸ್ 5,400ರಿಂದ 2,700 ರೂ., ಸಿಂಜಿನ್ (ಬಯೋಕಾನ್) ಕಂಪನಿಯ ರೆಮ್ವಿನ್ 3,950ರಿಂದ 2,450 ರೂ., ಸಿಪ್ಲಾ ಕಂಪನಿಯ ಸಿಪ್ರೆಮಿ 4,000ರಿಂದ 3,000 ರೂ., ಮಿಲ್ ಫಾರ್ವಸ್ಯುಟಿಕಲ್ಸ್ ಕಂಪನಿಯ ಡೆಸ್ರೆಮ್ 4,800ರಿಂದ 3,400 ರೂ., ಜ್ಯುಬಿಲೆಂಟ್ ಜೆನರಿಕ್ಸ್ ಕಂಪನಿಯ ಜ್ಯುಬಿ.ಆರ್ 4,700ರಿಂದ 3,400 ರೂ. ಮತ್ತು ಹೆಥೆರೋ ಹೆಲ್ತ್​ಕೇರ್​ನ ಕೊವಿಪೊರ್ 5,400ರಿಂದ 3,490 ರೂ.ಗಳಿಗೆ ಇಳಿಕೆಯಾಗಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಆರೋಗ್ಯ ಸ್ಥಿರ

    ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದ್ದು, ನಿರಂತರ ನಿಗಾ ವಹಿಸಲಾಗಿದೆ. ಸೋಂಕು ದೇಹದ ಯಾವುದೇ ಭಾಗಕ್ಕೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸಿಎಂ ಆಡಳಿತಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ನೀಡುತ್ತಿದ್ದಾರೆ.

    ಪುಸ್ತಕಗಳ ಮೊರೆ: ಬೆಳಗ್ಗೆ ಎಂದಿನಂತೆ ದಿನಚರಿಗಳನ್ನು ಮುಗಿಸಿ, ಸ್ವಲ್ಪ ಹೊತ್ತು ಯೋಗ, ಸರಳ ವ್ಯಾಯಾಮ ಮಾಡಿದ ಸಿಎಂ, ದಿನಪತ್ರಿಕೆಗಳನ್ನು ತಿರುವಿ ಹಾಕಿದರು. ಆಸ್ಪತ್ರೆಯಲ್ಲಿ ಸಮಯ ಕಳೆಯೋದಕ್ಕೆ ಪುಸ್ತಗಳ ಮೊರೆ ಹೋಗಿರುವ ಬಿಎಸ್​ವೈ, ಅದಕ್ಕಾಗಿ ಮನೆಯಲ್ಲಿದ್ದ ಕೆಲ ಪುಸ್ತಕಗಳನ್ನ ತರಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಣೆ ಮಾಡಿದ್ದಲ್ಲದೆ, ಸುದ್ದಿ ಚಾನೆಲ್​ಗಳನ್ನು ವೀಕ್ಷಿಸಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ವಾಟ್ಸ್​ಆ್ಯಪ್​ನಲ್ಲಿದೆ ಸಮಸ್ಯೆ; ಸೈಬರ್ ಸೆಕ್ಯುರಿಟಿ ಏಜೆನ್ಸಿಯಿಂದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts