ನವದೆಹಲಿ: ದೇಶದಲ್ಲಿ ಸೋಮವಾರ 16,432 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 187 ದಿನಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಮಾಣ ಇದಾಗಿದೆ. ಜೂನ್ 25ರಂದು 16,922 ಪ್ರಕರಣಗಳು ದಾಖಲಾಗಿದ್ದವು. ಇದೀಗ ಆರು ತಿಂಗಳ ನಂತರ ಮತ್ತೆ ಸೋಂಕಿನ ಪ್ರಮಾಣ ಇದೇ ಮಟ್ಟಕ್ಕೆ ಇಳಿಕೆಯಾಗಿದೆ. ಈ ತಿಂಗಳಲ್ಲಿ ದೇಶದಲ್ಲಿ 20 ಸಾವಿರಕ್ಕಿಂತ ಕಡಿಮೆ ಸೋಂಕಿನ ಸಂಖ್ಯೆ ವರದಿಯಾಗಿರುವುದು ಇದು ಮೂರನೇ ಬಾರಿಯಾಗಿದೆ.
ಪ್ರಯೋಗ ಯಶಸ್ವಿ: ಕರೊನಾ ಲಸಿಕೆಯನ್ನು ಜನರಿಗೆ ತಲುಪಿಸುವ ಸಲುವಾಗಿ ಆಯೋಜಿಸಿದ್ದ ಪೂರ್ವ ಪ್ರಯೋಗ ತಾಲೀಮು (ಡ್ರೖೆ ರನ್) ನಾಲ್ಕು ರಾಜ್ಯಗಳಲ್ಲಿ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಸೋಮವಾರ ಮತ್ತು ಮಂಗಳವಾರ ಆಂಧ್ರ ಪ್ರದೇಶ, ಗುಜರಾತ್, ಪಂಜಾಬ್ ಮತ್ತು ಅಸ್ಸಾಂನಲ್ಲಿ ಇದನ್ನು ನಡೆಸಲಾಗಿದೆ. ಕಾರ್ಯಕ್ರಮದ ಬಗ್ಗೆ ರಾಜ್ಯಗಳು ತೃಪ್ತಿ ವ್ಯಕ್ತಪಡಿಸಿವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಶೇ. 70 ಪುರುಷರು: ಭಾರತದಲ್ಲಿ ಕರೊನಾ ಮಹಾಮಾರಿಗೆ ಬಲಿಯಾದವರಲ್ಲಿ ಶೇ. 70 ಮಂದಿ ಪುರುಷರೇ ಆಗಿದ್ದಾರೆ. ದೇಶದಲ್ಲಿ ಸುಮಾರು 1.47 ಲಕ್ಷ ಜನರು ಕೋವಿಡ್-19ನಿಂದ ಸತ್ತಿದ್ದಾರೆ. 60 ವರ್ಷಕ್ಕಿಂತ ಕೆಳಗಿನವರ ಸಾವಿನ ಪ್ರಮಾಣ ಶೇ. 45 ಆಗಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದರು.
500ಕ್ಕೂ ಹೆಚ್ಚು ಪತ್ರಕರ್ತರ ಸಾವು
ಕರೊನಾ ವೈರಸ್ ಸಾಂಕ್ರಾಮಿಕತೆಗೆ ಭಾರತ ಸಹಿತ ಜಗತ್ತಿನ ನಾನಾ ದೇಶಗಳ 500ಕ್ಕೂ ಹೆಚ್ಚು ಪತ್ರಕರ್ತರು ಬಲಿಯಾಗಿದ್ದಾರೆ. ‘ಪ್ರೆಸ್ ಎಂಬ್ಲೆಮ್ ಕ್ಯಾಂಪೇನ್’ ಎಂಬ ಸಂಸ್ಥೆ ಕ್ರೋಡೀಕರಿಸಿರುವ ಮಾಹಿತಿ ಪ್ರಕಾರ, ಮಾರ್ಚ್ ಆರಂಭದಿಂದ ಡಿಸೆಂಬರ್ 26ರ ವರೆಗೆ 57 ದೇಶಗಳ 585 ಮಾಧ್ಯಮ ಪ್ರತಿನಿಧಿಗಳು ಕರೊನಾ ಹಾವಳಿಯಿಂದ ಮೃತಪಟ್ಟಿದ್ದಾರೆ. ಟಿವಿ ಹಾಗೂ ಪತ್ರಿಕೆಗಳ ಪತ್ರಕರ್ತರ ಸಾವಿನಲ್ಲಿ ಪೆರು (93) ನಂತರ 53 ಪತ್ರಕರ್ತರ ಸಾವಿ ನೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ.
ರೂಪಾಂತರಿ ವೈರಸ್ಗೂ ಲಸಿಕೆ ಪರಿಣಾಮಕಾರಿ
ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿತ ಕರೊನಾ ವೈರಸ್ ಚಿಕಿತ್ಸೆಗೆ ಈಗಾಗಲೇ ಕೋವಿಡ್-19ಗೆ ಕಂಡು ಹಿಡಿದಿರುವ ಲಸಿಕೆ ಪರಿಣಾಮಕಾರಿ ಆಗುವುದೇ ಎಂಬ ಚರ್ಚೆ ಆರಂಭವಾಗಿದೆ. ಲಸಿಕೆ ಪರಿಣಾಮಕಾರಿ ಆಗುವುದಿಲ್ಲ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ವೈರಸ್ನ ಹೊಸ ಪ್ರಭೇದವು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಕೂಡ ಸಾಕ್ಷ್ಯ ಸಿಕ್ಕಿಲ್ಲ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ರೂಪಾಂತರಿತ ಪ್ರಭೇದಕ್ಕೆ ತುತ್ತಾಗಿರುವ ರೋಗಿಗಳಿಗೆ ರಕ್ಷಣೆ ನೀಡಲು ಈಗಿನ ಲಸಿಕೆ ವಿಫಲವಾಗಲಿದೆ ಎನ್ನುವುದಕ್ಕೆ ಯಾವುದೇ ಆಧಾರಗಳು ಲಭ್ಯವಾಗಿಲ್ಲ ಎಂದು ರಾಘವನ್ ಹೇಳಿದರು. ಬಹುತೇಕ ಲಸಿಕೆಗಳು ಸ್ಪೈಕ್ ಪ್ರೊಟೀನ್ನ್ನು ಟಾರ್ಗೆಟ್ ಮಾಡುತ್ತವೆ. ರೂಪಾಂತರಿತ ವೈರಸ್ನಲ್ಲಿ ಬದಲಾವಣೆಗಳಿರುತ್ತವೆ. ಆದರೆ ವ್ಯಾಕ್ಸಿನ್ಗಳು, ವೈವಿಧ್ಯಮಯ ರಕ್ಷಣಾತ್ಮಕ ಪ್ರತಿಕಾಯಗಳನ್ನು ಉತ್ಪಾದಿಸಲು ಮಾನವ ದೇಹದ ರೋಗ ನಿರೋಧಕತೆ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ ಎಂದವರು ವಿವರಿಸಿದರು.
- ನವೆಂಬರ್ 25ರಿಂದ ಡಿಸೆಂಬರ್ 23ರ ನಡುವೆ ಬ್ರಿಟನ್ನಿಂದ 33,000 ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಆ ಪೈಕಿ, 114 ಜನರಿಗೆ ಕರೊನಾ ದೃಢಪಟ್ಟಿದೆ.
- ಬ್ರಿಟನ್ನಿಂದ ಕೇರಳಕ್ಕೆ ಮರಳಿದವರ ಪೈಕಿ 18 ಜನರಲ್ಲಿ ಕರೊನಾ ಪತ್ತೆ
- ಬ್ರಿಟನ್ನಿಂದ ಮರಳಿದ ಒಬ್ಬರಲ್ಲಿ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿದೆ ಎಂದು ಪಾಕಿಸ್ತಾನ ಹೇಳಿಕೆ
ಸೋಂಕು ಇದ್ದರೂ ರೈಲಿನಲ್ಲಿ ಪ್ರಯಾಣಿಸಿದ ಮಹಿಳೆ
ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರೂ ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಹೋಗಿದ್ದ ಮಹಿಳೆಯೊಬ್ಬರನ್ನು ಪತ್ತೆ ಹಚ್ಚಲಾಗಿದ್ದು, ಆಕೆಗೆ ಹೊಸ ಪ್ರಭೇದದ ಬ್ರಿಟನ್ ವೈರಸ್ ಇರುವುದು ಖಚಿತಪಟ್ಟಿದೆ. ಡಿಸೆಂಬರ್ 21ರಂದು ಬ್ರಿಟನ್ನಿಂದ ಮರಳಿದ್ದ 47 ವರ್ಷದ ಮಹಿಳೆ ರೈಲಿನ ಮೂಲಕ ಆಂಧ್ರ ಪ್ರದೇಶಕ್ಕೆ ಹೋಗಿದ್ದಳು. 24ರಂದು ಆಕೆಯನ್ನು ಪತ್ತೆ ಮಾಡಲಾಯಿತು. ಅಧಿಕಾರಿಗಳ ಪ್ರಕಾರ, ಈ ಮಹಿಳೆ ರಾಜ್ಯದಲ್ಲಿ ಹೊಸ ವೈರಸ್ ಇರುವ ಏಕೈಕ ವ್ಯಕ್ತಿಯಾಗಿದ್ದಾರೆ. ಈ ಮಹಿಳೆಯ ಮಗ ಹಾಗೂ ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಯ ಪರೀಕ್ಷೆ ನಡೆಸಲಾಗಿದ್ದು ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಆಂಧ್ರ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಕೆ. ಭಾಸ್ಕರ್ ತಿಳಿಸಿದ್ದಾರೆ.
ಗಂಭೀರ, ಆದರೂ ದೊಡ್ಡ ಸಮಸ್ಯೆ ಅಲ್ಲ
ಕರೊನಾ ವೈರಸ್ ಹಾವಳಿ ತುಂಬಾ ಗಂಭೀರವಾಗಿದ್ದರೂ, ಅಷ್ಟೇನೂ ದೊಡ್ಡ ಸಮಸ್ಯೆಯಲ್ಲ. ಆದರೆ ಇದನ್ನು ಎದುರಿಸಲು ಜಗತ್ತು ಸಜ್ಜುಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದೊಂದು ಎಚ್ಚರಿಕೆಯ ಕರೆಯಷ್ಟೆ ಎಂದು ತುರ್ತು ಸೇವೆಗಳ ಮುಖ್ಯಸ್ಥ ಮೈಕೆಲ್ ರಿಯಾನ್ ಹೇಳಿದ್ದಾರೆ. ಕರೊನಾ ವೈರಸ್ ವೇಗವಾಗಿ ಹರಡುತ್ತದೆ ಹಾಗೂ ಜನರನ್ನು ಕೊಲ್ಲುತ್ತದೆ. ಆದರೆ ಅದರಿಂದಾಗುತ್ತಿರುವ ಸಾವಿನ ದರ ಮುಂಬರುವ ವ್ಯಾಧಿಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಎಂದು ರಿಯಾನ್ ಹೇಳಿದರು. ಕರೊನಾ ವೈರಸ್ ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ಜಗತ್ತು ಪ್ರಗತಿ ಸಾಧಿಸಿದೆ. ಆದರೆ ಭವಿಷ್ಯದ ಸಾಂಕ್ರಾಮಿಕತೆಗಳನ್ನು ತಡೆಯಲು ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಹಿರಿಯ ಸಲಹೆಗಾರ ಬ್ರೂಸ್ ಏಯ್್ಲರ್ಡ್ ಎಚ್ಚರಿಸಿದ್ದಾರೆ.
ಚೀನಾದಲ್ಲಿ ತುರ್ತು ಚಿಕಿತ್ಸೆ
ಚೀನಾದ ವುಹಾನ್ ಪ್ರಾಂತ್ಯದ ಕೆಲ ಆಯ್ದ ಭಾಗಗಳಲ್ಲಿ ತುರ್ತಾಗಿ ಕರೊನಾ ಲಸಿಕೆ ಹಾಕುವ ಕಾರ್ಯಕ್ರಮ ಡಿಸೆಂಬರ್ 24ರಂದು ಆರಂಭವಾಗಿದೆ. ಚೀನಾ ಇದುವರೆಗೆ ಲಸಿಕೆಯನ್ನು ಅಧಿಕೃತವಾಗಿ ಘೋಷಿಸಿಲ್ಲ. ವುಹಾನ್ ಪ್ರಾಂತ್ಯದ 15 ಜಿಲ್ಲೆಗಳ 48 ಕ್ಲಿನಿಕ್ಗಳನ್ನು ಲಸಿಕೆ ಕೇಂದ್ರ ಗಳೆಂದು ಸಾರಲಾಗಿದೆ. 18-59 ವಯೋ ಗುಂಪಿನವರಿಗೆ ಲಸಿಕೆ ಹಾಕಲಾಗುತ್ತಿದೆ.
ಬ್ರಿಟನ್ಗೆ ಸವಾಲು: ಕರೊನಾ ವೈರಸ್ ಮೂರನೇ ಅಲೆ ತಡೆಯಬೇಕಾದರೆ ಬ್ರಿಟನ್ ಪ್ರತಿ ವಾರವೂ 20 ಲಕ್ಷ ಜನರಿಗೆ ಲಸಿಕೆ ಹಾಕಬೇಕಾಗುತ್ತದೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ನಡೆಸಿದ ಅಧ್ಯಯನ ಈ ಅಭಿಪ್ರಾಯ ಪಟ್ಟಿದೆ. ಕರೊನಾ ಸಾಂಕ್ರಾಮಿಕ ತೆಯಿಂದ ಬ್ರಿಟನ್ನಲ್ಲಿ 71,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
‘ನನ್ನನ್ನು ರಕ್ಷಿಸಿ..’ ಎಂದು ಅಪ್ಪನ ವಿರುದ್ಧವೇ ದೂರು ಕೊಟ್ಟಳು ಮಾಜಿ ಸಚಿವರ ಮಗಳು!
ಮದ್ವೆಯಾಗಿ ಮನೆಗೆ ಬಂದವಳಿಗೆ ಕಾದಿತ್ತು ಶಾಕ್: ಪೊಲೀಸ್ ರಕ್ಷಣೆಯಲ್ಲಿದ್ದ ವಧು ಸಖಿ ಕೇಂದ್ರದಲ್ಲೇ ದುರಂತ ಸಾವು!