ರಾಯಬಾಗ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ 21 ದಿನಗಳ ಲಾಕ್‌ಡೌನ್ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮಾರಕ ರೋಗ ಕರೊನಾ ತೊಲಗಿಸಲು ಒಗ್ಗಟ್ಟಾಗಿ ಹೋರಾಡೋಣ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ಶುಕ್ರವಾರ ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ ತಾಲೂಕು ಪಂಚಾಯಿತಿಯಿಂದ ಕೋವಿಡ್-19 ಹರಡದಂತೆ ಕೈಗೊಂಡ ಕ್ರಮದ ಕುರಿತು ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಪಟ್ಟಣ ಮತ್ತು ಗ್ರಾಮೀಣ ಜನರಿಗೆ ಕರೊನಾ ಸೋಂಕಿನ ನಿಯಂತ್ರಣ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.
ದಿನಸಿ ಸಾಮಗ್ರಿ ವ್ಯಾಪಾರಸ್ಥರಿಗೆ ಮತ್ತು ತರಕಾರಿ ಮಾರುವವರಿಗೆ ವ್ಯಾಪಾರ ಮಾಡಲು ಇನ್ನೂ ಒಂದೆರಡು ಗಂಟೆ ಹೆಚ್ಚಿನ ಸಮಯ ನೀಡಿದರೆ, ಜನದಟ್ಟಣೆ ನಿಯಂತ್ರಿಸಲು ಸಾಧ್ಯ. ಮನೆ ಮನೆಗೆ ತರಕಾರಿ ಮಾರಾಟ ಮಾಡಲು ಸೂಚನೆ ನೀಡಬೇಕು. ಕೇಂದ್ರ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯವನ್ನು ಅಧಿಕಾರಿಗಳು ಸರಿಯಾಗಿ ಮಾಡುವಂತೆ ಮನವಿ ಮಾಡಿದರು. ಪಟ್ಟಣದಲ್ಲಿರುವ ಚರಂಡಿಗಳನ್ನು ಸ್ವಚ್ಛತೆ ಮಾಡಿಸುವಂತೆ ಪ.ಪಂ. ಮುಖ್ಯಾಧಿಕಾರಿಗೆ ಸೂಚಿಸಿದರು.
ತಾ.ಪಂ. ಇಒ ಪ್ರಕಾಶ ವಡ್ಡರ ಮಾತನಾಡಿ, ಈಗಾಗಲೇ ಪ್ರತಿ ಗ್ರಾಮಗಳಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಪೊಲೀಸ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ವೈದ್ಯರನ್ನು ಸೇರಿಸಿಕೊಂಡು ಗ್ರಾಮೀಣ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಸುಜಾತಾ ಪಾಟೀಲ, ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ, ಸಿಪಿಐ ಕೆ.ಎಸ್. ಹಟ್ಟಿ, ಪಿಎಸ್‌ಐ ಗಜಾನನ ನಾಯಿಕ, ಪ.ಪಂ. ಮುಖ್ಯಾಧಿಕಾರಿ ಎಸ್.ಆರ್. ಮಾಂಗ, ಆರ್.ಎಫ್. ಹಂದಿಗುಂದ, ಡಾ. ಎಸ್.ಎಸ್. ಬಾನೆ, ಎಚ್.ಎ. ಭಜಂತ್ರಿ ಇತರರು ಇದ್ದರು.