ಮಲ್ಲಿಗೇನಹಳ್ಳಿಯಲ್ಲಿ ಮತದಾನ ಬಹಿಷ್ಕಾರ

ತರೀಕೆರೆ: ಅರಣ್ಯದಂಚಿನ ಮಲ್ಲಿಗೇನಹಳ್ಳಿ ಗ್ರಾಮಸ್ಥರಿಗೆ ಹಕ್ಕುಪತ್ರದ ಜತೆಗೆ ಮೂಲ ಸೌಕರ್ಯ ಕಲ್ಪಿಸಿಲ್ಲವೆಂಬ ಕಾರಣಕ್ಕೆ ಮತದಾನ ಬಹಿಷ್ಕರಿಸಿದರು. ಮತಗಟ್ಟೆ 186ರಲ್ಲಿ ಒಟ್ಟು 681 ಮತದಾರರಿದ್ದು, ಒಬ್ಬರೂ ಮತ ಚಲಾಯಿಸಲು ಮುಂದಾಗಲಿಲ್ಲ. ಅಧಿಕಾರಿಗಳಿಂದ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ.

ಮತದಾನ ಆರಂಭಗೊಂಡು ಸ್ವಲ್ಪ ಹೊತ್ತಿನಲ್ಲೇ ತಾಲೂಕಿನ ಕಲ್ಲತ್ತಿಪುರ ಮತಗಟ್ಟೆ 222, ಪಟ್ಟಣದ ಖಾಜಿ ಬೀದಿಯ ಮತಗಟ್ಟೆ 85, ಗೆಜ್ಜಗೊಂಡನಹಳ್ಳಿಯ ಮತಗಟ್ಟೆ 72, ಲಕ್ಕವಳ್ಳಿ ಹೋಬಳಿಯ ಹಲಸೂರು ಮತಗಟ್ಟೆ 125 ಹಾಗೂ ಗಡೀಹಳ್ಳಿ ಗ್ರಾಮದ 148ನೇ ಮತಗಟ್ಟೆಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದವು. ತಕ್ಷಣವೆ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಬದಲಾಯಿಸಿ ಸುಗಮ ಚುನಾವಣೆಗೆ ಅನುವು ಮಾಡಿಕೊಟ್ಟರು.

ಬಿಸಿಲು ತೀವ್ರವಾಗಿದ್ದರಿಂದ ಮಧ್ಯಾಹ್ನ 1 ಗಂಟೆಯಾದರೂ ಮತದಾನದ ಪ್ರಮಾಣ ನೀರಸವಾಗಿತ್ತು. ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆ ವೇಳೆಗೆ ಶೇ.65.61ಕ್ಕೆ ತಲುಪಿತ್ತು.

ಅಂಗವಿಕಲ ಮತದಾರರನ್ನು ಕರೆತರಲು ಸೆಕ್ಟರ್ ಮಟ್ಟದಲ್ಲಿ 21 ಆಟೋರಿಕ್ಷಾಗಳ ವ್ಯವಸ್ಥೆ ಮಾಡಲಾಗಿತ್ತು. ಮತಕೇಂದ್ರದೊಳಗೆ ತೆರಳಲು ಪ್ರತಿ ಮತಗಟ್ಟೆಯಲ್ಲಿ ವ್ಹೀಲ್​ಚೇರ್ ಇರಿಸಲಾಗಿತ್ತು. ಮತದಾರರ ಗೊಂದಲ ನಿವಾರಣೆಗಾಗಿ ಪ್ರತಿ ಮತಗಟ್ಟೆಯಲ್ಲೂ ಸಹಾಯವಾಣಿ ತೆರೆಯಲಾಗಿತ್ತು.

ಧಿಕ್ಕಾರ ಕೂಗಿದ ಮಾಜಿ ಶಾಸಕ: ತರೀಕೆರೆಯ ಖಾಜಿ ಬೀದಿಯ ಮತಗಟ್ಟೆ 86ರ ಮತದಾರರ ಪಟ್ಟಿಯಲ್ಲಿ ಸುಮಾರು 100 ಅಲ್ಪಸಂಖ್ಯಾತ ಮತದಾರರ ಹೆಸರು ನಾಪತ್ತೆಯಾಗಿವೆ ಎಂದು ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷರಾದ ಟಿ.ಎಸ್.ಧರ್ಮರಾಜ್, ಟಿ.ಎಸ್.ಪ್ರಕಾಶ್ ವರ್ಮ ಆರೋಪಿಸಿದರು. ಅಲ್ಲದೆ ಮತಗಟ್ಟೆ ಬಳಿ ಕೆಲಕಾಲ ಚುನಾವಣಾ ಆಯೋಗದ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲಿಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವೊಲಿಸುವ ಪ್ರಯತ್ನ ಮಾಡಿದರೂ ಅವರು ಬಹಿಷ್ಕಾರ ಹಿಂಪಡೆಯಲಿಲ್ಲ. | ಎನ್.ಟಿ.ಧಮೋಜಿ ರಾವ್, ತಹಸೀಲ್ದಾರ್