ಕಳವು ತಡೆಯಲು ಕೃತಿಸ್ವಾಮ್ಯ

ಇತ್ತೀಚಿನ ದಿನಗಳಲ್ಲಿ ಆಡಿಯೋ, ವಿಡಿಯೋ, ಫೋಟೋ ಅಥವಾ ಬರಹಗಳನ್ನು ಯೂಟ್ಯೂಬ್, ಇಂಟರ್​ನೆಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುವವರ ಸಂಖ್ಯೆ ಅದರಲ್ಲಿಯೂ ಯುವ ಸಮುದಾಯದವರ ಸಂಖ್ಯೆ ಹೆಚ್ಚಾಗಿದೆ. ಇವುಗಳ ಪೈಕಿ ತೀರಾ ಅಪರೂಪ ಎನಿಸುವ ಅಥವಾ ತಮ್ಮ ಈ ಕೆಲಸಗಳನ್ನು ಕದ್ದು ತಮ್ಮ ಹೆಸರಿನಿಂದ ಅದನ್ನು ಬಳಸಿಕೊಳ್ಳಬಾರದು ಎಂದುಕೊಳ್ಳುವವರು ಕೃತಿಸ್ವಾಮ್ಯ ಪಡೆಯುವುದಕ್ಕೆ ಅವಕಾಶವಿದೆ.

|ಆರ್.ಬಿ. ಗುರುಬಸವರಾಜ

ಕೃತಿಸ್ವಾಮ್ಯವು ಹಕ್ಕುಗಳ ಗುಚ್ಛವಾಗಿದ್ದು, ತಮ್ಮ ಕೆಲಸಗಳನ್ನು ಇತರರು ಕದಿಯದಂತೆ ಪಡೆಯುವ ಅಧಿಕೃತ ಮುದ್ರೆ. ಸಂಪಾದನೆ, ಸಂವಹನ, ಮರುಸೃಷ್ಟಿ, ಅನುವಾದ ಇತ್ಯಾದಿ ಸೃಜನಶೀಲ ಕೃತಿಗಳಿಗೆ ನೀಡುವ ದೇಶವ್ಯಾಪಿ ಅಥವಾ ಅಂತಾರಾಷ್ಟ್ರೀಯ ಮಟ್ಟದ ಹಕ್ಕು. ಸಾಹಿತ್ಯ, ನಾಟಕ, ಸಂಗೀತ, ಸಿನಿಮಾ, ಧ್ವನಿಮುದ್ರಣ, ಕಲಾಕೃತಿಗಳು ಹೀಗೆ ವಿವಿಧ ಪ್ರಕಾರದ ಸೃಜನಾತ್ಮಕ ಕೃತಿ, ಡಾಕ್ಯುಮೆಂಟರಿಗಳಿಗೆ ಈ ಹಕ್ಕನ್ನು ಪಡೆದುಕೊಳ್ಳಬಹುದು. ಬರಹಗಾರರು, ಕಲಾವಿದರು, ವಿನ್ಯಾಸಕಾರರು, ನಾಟಕಕಾರರು, ಸಂಗೀತಗಾರರು, ವಾಸ್ತುಶಿಲ್ಪಿಗಳು, ಧ್ವನಿ ರೆಕಾರ್ಡರ್, ಛಾಯಾಚಿತ್ರಗಾರರು, ಸಿನಿಮಾಟೋಗ್ರಾಫರ್, ಕಂಪ್ಯೂಟರ್ ಸಾಫ್ಟ್​ವೇರ್ ತಜ್ಞರು… ಹೀಗೆ ವಿವಿಧ ರಂಗಗಳವರು ತಮ್ಮ ಸೃಜನಶೀಲ ಉತ್ಪನ್ನಕ್ಕೆ ಕಾನೂನಾತ್ಮಕ ರಕ್ಷಣೆ ಒದಗಿಸಿಕೊಳ್ಳಲು ಕೃತಿಸ್ವಾಮ್ಯ ಎಂಬ ಪ್ರಬಲ ಅಸ್ತ್ರವನ್ನು ಬಳಸಿಕೊಳ್ಳಬಹುದಾಗಿದೆ.

ಇದೊಂದು ರೀತಿಯಲ್ಲಿ ಪೇಟೆಂಟ್ ಎಂದೆನಿಸಿದರೂ, ವಾಸ್ತವದಲ್ಲಿ ಕೃತಿಸ್ವಾಮ್ಯವು ಪೇಟೆಂಟ್​ಗಿಂದ ಭಿನ್ನ. ಪೆಟೆಂಟ್ ಐಡಿಯಾಗಳನ್ನು ರಕ್ಷಿಸಿದರೆ, ಕೃತಿಸ್ವಾಮ್ಯವು ಅಭಿವ್ಯಕ್ತಿಯನ್ನು ರಕ್ಷಿಸುತ್ತದೆ. ಕಲ್ಪನೆಗಳು, ಕಾರ್ಯ ವಿಧಾನಗಳು, ಆಲೋಚನೆಗಳು, ಗಣಿತದ ಪರಿಕಲ್ಪನೆಗಳನ್ನು ‘ಪೇಟೆಂಟ್’ ರಕ್ಷಿಸಿದರೆ, ಇವುಗಳಿಗೆ ಕೃತಿಸ್ವಾಮ್ಯದಡಿಯಲ್ಲಿ ರಕ್ಷಣೆ ಇಲ್ಲ. 1957ರ ಕೃತಿಸ್ವಾಮ್ಯ ಕಾಯ್ದೆ ಜಾರಿಗೆ ಬಂದಿದ್ದು, ಅದರಲ್ಲಿ ಈ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ.

ನೋಂದಣಿ ಪ್ರಕ್ರಿಯೆ: ಕೃತಿಸ್ವಾಮ್ಯದ ನೋಂದಣಿ ಪ್ರಕ್ರಿಯೆ ಹಲವು ಹಂತಗಳಲ್ಲಿ ಇರುತ್ತದೆ. ಮೊದಲು ವೆಬ್​ಸೈಟ್​ನಿಂದ ನಮೂನೆ-14ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ನಂತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಪ್ರತಿ ಕೆಲಸಕ್ಕೂ ಪ್ರತ್ಯೇಕವಾಗಿ ನೋಂದಣಿ ಮಾಡಿಸಬೇಕು. ಅರ್ಜಿಯೊಂದಿಗೆ ಅಗತ್ಯ ಶುಲ್ಕ ಪಾವತಿಸಬೇಕು. ಅರ್ಜಿದಾರರು ಹಾಗೂ ಹಕ್ಕು ಪಡೆಯುವವರು ಸಹಿ ಹಾಕಬೇಕು. ಕೆಲವು ವೇಳೆ ಕೃತಿಕಾರರಲ್ಲದವರಿಗೆ ಹಕ್ಕುಗಳನ್ನು ವರ್ಗಾಯಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ವಾರಸುದಾರರು ಸಹಿ ಹಾಕಬೇಕು. ವಾರಸುದಾರಿಕೆ ನ್ಯಾಯಾಂಗ ಇಲಾಖೆಯ ಮೂಲಕ ಅಧಿಕೃತಗೊಂಡಿರಬೇಕು.

ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ ಅಥವಾ ಪೋಸ್ಟಲ್ ಆರ್ಡರ್ ರೂಪದಲ್ಲಿ ರಿಜಿಸ್ಟ್ರಾರ್ ಆಫ್ ಕಾಪಿರೈಟ್ಸ್, ನವದೆಹಲಿ ಇವರಿಗೆ ಸಂದಾಯವಾಗುವಂತೆ ಪಾವತಿಸಬೇಕು. ಇ-ಪಾವತಿಯ ಸೌಲಭ್ಯವೂ ಲಭ್ಯವಿದೆ. ಸಂಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಬೌಧಿಕ್ ಸಂಪದಾ ಭವನ, ನಂ. 32, ಸೆಕ್ಟರ್ 14, ದ್ವಾರಕಾ, ನವದೆಹಲಿ- 110075 ಇಲ್ಲಿಗೆ ಕಳಿಸಬೇಕು.

ಅರ್ಜಿ ತಲುಪಿದ 30 ದಿನಗಳ ನಂತರ ಕಚೇರಿಯಿಂದ ಡೈರಿ ನಂಬರ್ ಸಿಗುತ್ತದೆ. ಇದೊಂದು ರೀತಿಯ ರೆಫರೆನ್ಸ್ ನಂಬರ್ ಇದ್ದಂತೆ. ನಂತರ ಎಲ್ಲಾ ದಾಖಲೆಗಳ ಪರಿಶೀಲನೆಯಾದ ನಂತರ ಕಾಪಿರೈಟ್ ಪರವಾನಗಿ ಸಿಗುತ್ತದೆ. ಕೆಲವು ವೇಳೆ ಕೃತಿಗೆ ಸಂಬಂಧಿಸಿದ ಆಕ್ಷೇಪಣೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸದೇ ಇದ್ದರೆ ಕಾಪಿರೈಟ್ ಬೇಗನೇ ಸಿಗುವುದಿಲ್ಲ. ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೆ 3-4 ತಿಂಗಳಲ್ಲಿ ಕಾಪಿರೈಟ್ ಪರವಾನಗಿ ದೊರೆಯುತ್ತದೆ. ಅದು ದೊರೆತ ನಂತರ ಮಾತ್ರ ಅಧಿಕೃತವಾಗಿ ‘ದಿ’ ಚಿಹ್ನೆಯನ್ನು ಬಳಸಬಹುದು. ಬಹುತೇಕ ಕೃತಿ/ ಸಂಗೀತ ಉತ್ಪನ್ನಗಳಲ್ಲಿ ಬಳಸುತ್ತಿರುವುದು ಅನಧಿಕೃತ ಚಿಹ್ನೆಯಾಗಿದೆ.

ಕಂಪ್ಯೂಟರ್ ಪ್ರೋಗ್ರಾಂಗಳಿಗೂ ಅವಕಾಶ: ಹಕ್ಕುಸ್ವಾಮ್ಯ ಪಡೆಯಲು ಕೇವಲ ಪ್ರಕಟಿತ ಕೃತಿಗಳೇ ಇರಬೇಕೆಂದೇನಿಲ್ಲ. ಅಪ್ರಕಟಿತ ಕೃತಿಗಳನ್ನೂ ಸಹ ನೋಂದಾಯಿಸಲು ಅವಕಾಶವಿದೆ. ಅಪ್ರಕಟಿತ ಕೃತಿಗಳಾದರೆ ಹಸ್ತಪ್ರತಿಯನ್ನು ಅರ್ಜಿಯ ಜತೆ ಲಗತ್ತಿಸಬೇಕು. ಮುಂದೆ ಅದೇ ಹಸ್ತಪ್ರತಿ ಪ್ರಕಟಗೊಂಡಾಗ ನಮೂನೆ-15ನ್ನು ಭರ್ತಿ ಮಾಡುವ ಮೂಲಕ ಅದೇ ಕೃತಿಗೆ ಹಕ್ಕುಸ್ವಾಮ್ಯವನ್ನು ಪಡೆಯಬಹುದು.

ಕಂಪ್ಯೂಟರ್ ಸಾಫ್ಟ್​ವೇರ್ ಅಥವಾ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಸಾಹಿತ್ಯಿಕ ಕೆಲಸ ಎಂದು ನೋಂದಾಯಿಸಬಹುದು. 1957ರ ಕಾಪಿರೈಟ್ ಸೆಕ್ಷನ್ 2(ಒ) ಪ್ರಕಾರ ಕಂಪ್ಯೂಟರ್ ಡೇಟಾಬೇಸ್​ಗಳು, ಕಂಪ್ಯೂಟರ್ ಪ್ರೋಗ್ರಾಂಗಳು, ಕೋಷ್ಟಕಗಳು, ಸಂಕಲನಗಳನ್ನು ನೋಂದಾಯಿಸಲು ಅವಕಾಶ ಇದೆ. ಸಾಫ್ಟ್​ವೇರ್ ಉತ್ಪನ್ನದ ನೋಂದಣಿಗಾಗಿ ಮೂಲ ಕೋಡ್ ಮತ್ತು ಅಬ್ಜೆಕ್ಟ್ ಕೋಡ್​ಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಹಾಗೆಯೇ ವೆಬ್​ಸೈಟ್​ಗಳಿಗೂ ಸಹ ಕಾಪಿರೈಟ್ ಪಡೆಯಬಹುದು. ಆದರೆ ವೆಬ್​ಸೈಟ್​ನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಘಟಕ, ವಿಷಯ, ಕೆಲಸಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಕಾಪಿರೈಟ್ ಪಡೆಯಬಹುದು.

ಮೋಸ ಹೋಗದಿರಿ: ಕಾಪಿರೈಟ್ ನೊಂದಣಿ ಮಾಡಿಸಲು ಅನೇಕ ಏಜೆನ್ಸಿಗಳಿವೆ. ಬಹುತೇಕ ಎಲ್ಲಾ ಏಜೆನ್ಸಿಗಳ ಉದ್ದೇಶ ಲಾಭಗಳಿಸುವುದಾಗಿದೆ. ನಿಗದಿತ ಅವಧಿಯಲ್ಲಿ ಮಾಡಿಸಿಕೊಡುವುದಾಗಿ ಭರವಸೆ ನೀಡುತ್ತವೆ. ಆದರೆ ಸರಿಯಾಗಿ ಗಮನ ಹರಿಸದಿದ್ದರೆ ಬೇಗನೆ ಕಾಪಿರೈಟ್ ಸಿಗುವುದಿಲ್ಲ. ಆದ್ದರಿಂದ ವಿಶ್ವಾಸಾರ್ಹವಾಗಿರುವ, ಉತ್ತಮ ಸೇವೆ ಒದಗಿಸುವ ಏಜೆನ್ಸಿಗಳನ್ನೇ ಆಯ್ದುಕೊಳ್ಳಿ.

ಬಿಲ್​ಗೇಟ್ಸ್, ಕಾಪಿರೈಟ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ಗೇಟ್ಸ್ 1975ರಲ್ಲಿ ನ್ಯೂಮೆಕ್ಸಿಕೋದ ಅಲ್ಬುಕರ್ಕ್ ನಗರದ ಒಂದು ಚಿಕ್ಕ ಕೋಣೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನು ಪ್ರಾರಂಭಿಸಿದರು. ಒಂದು ವರ್ಷದ ಅವಿರತ ಶ್ರಮದ ಫಲವಾಗಿ ಅವರು ‘ಮೈಕ್ರೋಸಾಫ್ಟ್ 1.0’ ಮೂಲ ತಂತ್ರಾಂಶ ಅಭಿವೃದ್ಧಿಪಡಿಸಿದರು. ಈ ಸಾಫ್ಟ್​ವೇರನ್ನು ಬೇರೆಯವರು ಅವರದ್ದೇ ಹೆಸರಿನಲ್ಲಿ ಬಳಸುತ್ತಿರುವುದು ಸ್ವಲ್ಪ ದಿನಗಳಲ್ಲಿಯೇ ಅವರ ಗಮನಕ್ಕೆ ಬಂತು. ಆ ಕಂಪನಿ ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡಿದರೂ, ಕೋರ್ಟ್ ಕೇಳಿದ ಪ್ರಶ್ನೆಗೆ ಇವರ ಬಳಿ ಉತ್ತರ ಇರಲಿಲ್ಲ. ಏಕೆಂದರೆ ಸಾಫ್ಟ್ ವೇರನ್ನು ಕಾಪಿರೈಟ್ ಮಾಡಿಸಿರಲಿಲ್ಲ. ನಂತರ ಎಲ್ಲಾ ದಾಖಲೆಗಳ ವಿವರಗಳನ್ನುಕೋರ್ಟ್​ಗೆ ನೀಡಿ, ಅದರ ವಿವರಗಳನ್ನು ತಿಳಿಸಿದ ಬಳಿಕ ಕೋರ್ಟ್ ಬಿಲ್ ಗೇಟ್ಸ್ ಪರ ತೀರ್ಪು ನೀಡಿತು. ಅಂದಿನಿಂದ ಅವರು ತಮ್ಮೆಲ್ಲಾ ಕಾರ್ಯಗಳನ್ನು ಕಾಪಿರೈಟ್ ಮಾಡಿಸತೊಡಗಿದರು.

ಅರ್ಜಿ ಸಲ್ಲಿಕೆ ಹೇಗೆ?

ಎಲ್ಲಾ ರೀತಿಯ ಸೃಜನಾತ್ಮಕ ಕೃತಿಗಳನ್ನು ನೋಂದಾಯಿಸಲು ‘ರಿಜಿಸ್ಟ್ರಾರ್ ಆಫ್ ಕಾಪಿರೈಟ್’ ನೇತೃತ್ವದಲ್ಲಿ ಕಚೇರಿ ಸ್ಥಾಪಿಸಲಾಗಿದೆ. ಇದು ನವದೆಹಲಿಯಲ್ಲಿದೆ. ಅರ್ಜಿಗಳನ್ನು -ಠಿ;ಡಿಡಿಡಿ.ಟಟಢ್ಟಜಿಜಜಠಿ.ಜಟಡ.ಜ್ಞಿ| ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಅಲ್ಲದೇ 2014 ರಿಂದ ಆನ್​ಲೈನ್​ನಲ್ಲಿ ಇ-ಫೈಲಿಂಗ್ ಸೌಕರ್ಯದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಲೇಖಕ, ಮಾಲೀಕ, ನಿಯೋಜಕ ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ಯಾರಾದರೂ ಅರ್ಜಿ ಸಲ್ಲಿಸಬಹುದು.

ಶುಲ್ಕ ಎಷ್ಟು?

ಕೃತಿಯ ಹಕ್ಕುಗಳ ಆಧಾರದ ಮೇಲೆ ಶುಲ್ಕದಲ್ಲಿ ವ್ಯತ್ಯಾಸಗಳಿವೆ. ಸಾಹಿತ್ಯಿಕ, ನಾಟಕ, ಸಂಗೀತ ಮತ್ತು ಕಲಾ ಕೃತಿಗಳಿಗೆ  500 ರೂ. ಶುಲ್ಕವಿದ್ದರೆ, ಸಮೂಹ ಸಂವಹನದಂತಹ ಪ್ರಸಾರಾತ್ಮಕ ಕೆಲಸಗಳಿಗೆ 40 ಸಾವಿರ ರೂಗಳವರೆಗೆ ಶುಲ್ಕವಿದೆ. ಶುಲ್ಕದ ವಿವರಗಳಿಗೆ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ. ಅಲ್ಲದೇ ಯಾವುದೇ ಸಂದರ್ಭದಲ್ಲಿಯೂ ಹಕ್ಕುಸ್ವಾಮ್ಯದ ವಾರಸುದಾರಿಕೆಯನ್ನು ಸೂಕ್ತ ಶುಲ್ಕದೊಂದಿಗೆ ಬದಲಾಯಿಸಲು ಅವಕಾಶವಿದೆ.

Leave a Reply

Your email address will not be published. Required fields are marked *