ಕಾಂಗ್ರೆಸ್​ ರೋಡ್​ ಶೋನಲ್ಲಿ ಮಹಿಳಾ ಪೊಲೀಸ್​ ಸಿವಿಲ್​ ಡ್ರೆಸ್​ ಜತೆ ಕೇಸರಿ ಶಾಲು ಧರಿಸಿದ್ದೇಕೆ?

ಭೋಪಾಲ್​: ಮಧ್ಯಪ್ರದೇಶದ ಭೋಪಾಲ್​ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವ ಹಿರಿಯ ನಾಯಕ ದಿಗ್ವಿಜಯ ಸಿಂಗ್​ ರೋಡ್​ ಶೋ ವೇಳೆ ವಿವಾದಾತ್ಮಕ ಘಟನೆಯೊಂದು ನಡೆದಿದೆ. ಇಂದು (ಬುಧವಾರ) ನಡೆದ ರೋಡ್​ ಶೋ ವೇಳೆ ಸಿವಿಲ್​ ಡ್ರೆಸ್​ ಧರಿಸಿದ್ದ ಪೊಲೀಸ್​ ಸಿಬ್ಬಂದಿ ಕೇಸರಿ ಬಣ್ಣದ ಶಾಲನ್ನು ತಮ್ಮ ಕೊರಳಪಟ್ಟಿಯಲ್ಲಿ ಹಾಕಿಕೊಂಡಿದ್ದಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

ಪರಿಚಿತ ಹಿಂದು ಸನ್ಯಾಸಿ ಕಂಪ್ಯೂಟರ್​ ಬಾಬಾ ಮತ್ತು ಇನ್ನಿತರ ಸನ್ಯಾಸಿಗಳು ಇಂದು ದಿಗ್ವಿಜಯ ಸಿಂಗ್​​​ ನಡೆಸಿದ ರೋಡ್​ ಶೋಗೆ ಸಾಥ್​ ನೀಡಿದರು. ಈ ವೇಳೆ ದಿಗ್ವಿಜಯ ಸಿಂಗ್​ ಅವರು ತಮ್ಮ ವಾಹನದ ಮೇಲೆ ನಿಂತು ಭಾರತ್​ ಮಾತಾ ಕೀ ಜೈ ಮತ್ತು ನಾವೆಲ್ಲರೂ ಒಂದೇ ಎಂದು ಇಡೀ ರೋಡ್ ಶೋನಲ್ಲಿ ಸಾರ್ವಜನಿಕರನ್ನು ಹುರಿದುಂಬಿಸಿದರು.

ರೋಡ್​ ಶೋನಲ್ಲಿ ಕಾನೂನು ಸುವ್ಯವಸ್ಥೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್​​ ಸಿಬ್ಬಂದಿಯಲ್ಲಿ ಮಹಿಳಾ ಸಿಬ್ಬಂದಿ ಸಿವಿಲ್​ ಡ್ರೆಸ್​ ಧರಿಸಿ, ಕೇಸರಿ ಶಾಲನ್ನು ಹಾಕಿಕೊಂಡಿದ್ದರು. ಆದರೆ, ಪುರುಷ ಸಿಬ್ಬಂದಿ ಮಾತ್ರ ಪೊಲೀಸ್​ ಸಮವಸ್ತ್ರದಲ್ಲಿದ್ದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಈ ಬಗ್ಗೆ ಮಾತನಾಡಿದ ಓರ್ವ ಮಹಿಳಾ ಪೊಲೀಸ್​, ಇಂದು ಕಂಪ್ಯೂಟರ್​ ಬಾಬಾ ಅವರು ರೋಡ್​ ಶೋ ಆಯೋಜನೆ ಮಾಡಿದ್ದು, ನಮ್ಮನ್ನು ಕೇಸರಿ ಶಾಲನ್ನು ಹಾಕಿಕೊಳ್ಳುವಂತೆ ಹೇಳಿದರು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಭೋಪಾಲ್​ ಡಿಐಜಿ ಅವರನ್ನು ಕೇಳಿದಾಗ ನಮ್ಮ ಯಾವ ಸಿಬ್ಬಂದಿಯೂ ಕೇಸರಿಯಲ್ಲದೆ, ಯಾವುದೇ ಬಣ್ಣದ ಶಾಲನ್ನು ಧರಿಸಿಲ್ಲ . ರೋಡ್​ ಶೋ ಆಯೋಜಿಸಿದವರು ಹಾಗೂ ಪೊಲೀಸ್​ ಪಡೆಗಳು ಕೆಲವು ಸ್ವಯಂ ಸೇವಕರನ್ನು ನೇಮಿಸಿರುತ್ತಾರೆ. ಸ್ವಯಂ ಸೇವಕರು ಅವರಿಗೆ ಬೇಕಾದ್ದನ್ನು ಧರಿಸಬಹುದು ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *