ಪ್ರತಿ ಮತದಾರರಿಗೆ 300 ರೂ. ಎಂದು ಬರೆದು ಪಕ್ಷದ ಕಚೇರಿಯಲ್ಲಿ ಸಂಗ್ರಹಿಸಿಟ್ಟಿದ್ದ 1.5 ಕೋಟಿ ಹಣ ಜಪ್ತಿ

ಥೇಣಿ: ತಮಿಳುನಾಡಿನಲ್ಲಿ ಎರಡನೇ ಹಂತದಲ್ಲಿ ನಾಳೆ ಮತದಾನ ನಡೆಯಲಿದ್ದು, ತಮ್ಮ ಕಚೇರಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ವಶಪಡಿಸಿಕೊಳ್ಳುವುದನ್ನು ತಡೆಯಲು ಎಎಂಎಂಕೆ(ಅಮ್ಮ ಮಕ್ಕಳ್‌ ಮುನ್ನೇತ್ರ ಕಳಂಗಂ) ಪಕ್ಷದ ಕೆಲವರ ಗುಂಪು ಮುಂದಾದ ಬಳಿಕ ಥೇಣಿ ಜಿಲ್ಲೆಯ ಆಂಡಿಪಟ್ಟಿ ಎಂಬಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮೂಲಗಳ ಪ್ರಕಾರ, ಮತದಾರರಿಗೆ ಹಂಚಲೆಂದು ಹಣವನ್ನು ಸಂಗ್ರಹಿಸಲಾಗುತ್ತಿದೆ ಎನ್ನುವ ಮಾಹಿತಿ ಆಧಾರದ ಮೇಲೆ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಟಿಟಿವಿ ದಿನಕರನ್‌ ನೇತೃತ್ವದ ಎಎಂಎಂಕೆ ಕಚೇರಿಯ ಬಳಿ ತೆರಳಿದ್ದಾರೆ. ಅಧಿಕಾರಿಗಳು ಕಚೇರಿ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಕಚೇರಿಯ ಬಾಗಿಲನ್ನು ಒಳಭಾಗದಿಂದ ಹಾಕಿಕೊಳ್ಳಲಾಗಿದೆ ಮತ್ತು ಅಧಿಕಾರಿಗಳ ಪ್ರವೇಶವನ್ನು ತಡೆಯಲಾಗಿದೆ. ಕೂಡಲೇ ಕಚೇರಿಯ ಬಳಿ ಅಧಿಕ ಜನರು ಜಮಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲನ್ನು ತೆರೆಯಲು ಯತ್ನಿಸಿದ್ದಾರೆ.

ಪೊಲೀಸರನ್ನು ತಡೆಯಲು ಮುಂದಾದ ಜನರನ್ನು ನಿಯಂತ್ರಿಸಲು ಪೊಲೀಸರು ನಾಲ್ಕು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೆ, ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕೊನೆಗೂ ಬಾಗಿಲನ್ನು ತೆರೆದ ಪೊಲೀಸರು ಮೂವರನ್ನು ಬಂದಿಸಿದ್ದಾರೆ. ಸುಮಾರು 50 ಲಕ್ಷಕ್ಕಿಂತಲೂ ಕಡಿಮೆ ಇಲ್ಲದಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ.

ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮತದಾರರಿಗೆ ಹಣ ಹಂಚಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ನಮ್ಮ ತಂಡ ಥೇಣಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದೆ. ಈ ವೇಳೆ ಎಎಂಎಂಕೆ ಬೆಂಬಲಿಗ ತಂಡವನ್ನು ನೋಡಿದ ಕೂಡಲೇ ಶಟರ್ ಎಳೆದು ಲಾಕ್‌ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಹಣದ ಕಂತೆಗಳು ಕಂಡುಬಂದಿವೆ. ಸಣ್ಣ ಗುಂಪೊಂದು ಸ್ಥಳದಿಂದ ಹಣದ ಪ್ಯಾಕೆಟ್‌ಗಳೊಂದಿಗೆ ಪರಾರಿಯಾಗಲು ಯತ್ನಿಸಿದ ವೇಳೆ ತಂಡವು ಅವರನ್ನು ತಡೆದಿದೆ ಎಂದು ತಿಳಿಸಿದರು.

ಇದೀಗ ಪರಿಸ್ಥಿತಿ ತಿಳಿಯಾಗಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಯುತ್ತಿದೆ. ಹಣದ ಪ್ಯಾಕೆಟ್‌ಗಳ ಮೇಲೆ ವಾರ್ಡ್‌ ನಂಬರ್‌ ಮತ್ತು ಮತದಾರರ ಸಂಖ್ಯೆಯೊಂದಿಗೆ ತಲಾ ಮತದಾರರಿಗೆ ಹಂಚುವ 300 ರೂ. ಎಂದು ಬರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)