ನಡು ರಸ್ತೆಯಲ್ಲೇ ಮಹಿಳಾ ಪೊಲೀಸ್​ ಅಧಿಕಾರಿಗೆ ಬೆಂಕಿ ಹಚ್ಚಿ ಕೊಂದಿದ್ದ ಪೊಲೀಸ್​ ಅಧಿಕಾರಿ ಸಾವು

ತಿರುವನಂತಪುರ: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪೊಲೀಸ್​ ಅಧಿಕಾರಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.

ಜೂ. 15 ರಂದು ವಲ್ಲಿಕುನ್ನಂ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಿಪಿಒ ಸೌಮ್ಯ ಪುಷ್ಕರನ್​​ (34) ಎಂಬುವರ ಮೇಲೆ ಅಳುವಾ ಸಂಚಾರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಜಾಸ್​ ಎಂಬ ಪೊಲೀಸ್​ ಅಧಿಕಾರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಸೌಮ್ಯ ಅವರಿಗೆ ಬೆಂಕಿ ಹಚ್ಚುವ ವೇಳೆ ಏಜಾಸ್​ಗೂ ಬೆಂಕಿ ತಗುಲಿತ್ತು. ಶೇ. 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಏಜಾಸ್​ನನ್ನು ಅಳಪುಳ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅತ ಬುಧವಾರ ಸಂಜೆ ಮೃತಪಟ್ಟಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ

ತಮ್ಮ ದೈನಂದಿನ ಕೆಲಸ ಮುಗಿಸಿಕೊಂಡು ಸೌಮ್ಯ ಜೂನ್​ 15ರ ಮಧ್ಯಾಹ್ನ 3.30ಕ್ಕೆ ಮನೆಗೆ ಮರಳುತ್ತಿದ್ದರು. ಇವರು ಚಲಾಯಿಸುತ್ತಿದ್ದ ಬೈಕ್​ಗೆ ಕಾರಿನಲ್ಲಿ ಬಂದ ಏಜಾಸ್​ ಡಿಕ್ಕಿ ಹೊಡೆದಿದ್ದ. ಕೆಳಗೆ ಬಿದ್ದ ಸೌಮ್ಯ ಮೇಲೆದ್ದು, ಹತ್ತಿರದಲ್ಲಿದ್ದ ಮನೆಯೊಳಗೆ ಹೋಗಿ ಬಚಾವ್​ ಆಗಲು ಯತ್ನಿಸಿದ್ದರು. ಆದರೆ, ಮನೆಯೊಳಗೆ ನುಗ್ಗಿದ ಏಜಾಸ್​, ಸೌಮ್ಯ ಅವರನ್ನು ಹೊರಗೆ ಎಳೆದು ತಂದು, ಕೈಕಾಲು ಕಟ್ಟಿಹಾಕಿ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ.

ದೇಹವನ್ನು ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡ ಕಾರಣ ಸೌಮ್ಯ ಜೀವಂತವಾಗಿ ದಹನವಾಗಿದ್ದರು. ಅವರಿಗೆ ಬೆಂಕಿ ಹಚ್ಚುವಾಗ ಏಜಾಸ್​​ಗೂ ಸುಟ್ಟು ಗಾಯಗಳಾಗಿದ್ದವು. ಸ್ಥಳದಲ್ಲಿದ್ದ ಜನರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *