ಶಾಲಾ ಮಕ್ಕಳ ಮೇಲೆ ಹಣ ಎಸೆದು ಅಮಾನತಾದ ಪೊಲೀಸ್​ ಅಧಿಕಾರಿ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸುತ್ತಿದ್ದಾಗ ಕೃತ್ಯ

ನಾಗ್ಪುರ: ಗಣರಾಜ್ಯೋತ್ಸವ ನಿಮಿತ್ತ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನರ್ತಿಸುತ್ತಿದ್ದ ಮಕ್ಕಳ ಮೇಲೆ ಹಣ ಎಸೆದ ಪೊಲೀಸ್​ ಹೆಡ್​ ಕಾನ್​ಸ್ಟೆಬಲ್​ ಒಬ್ಬ ಅಮಾನತುಗೊಂಡಿದ್ದಾನೆ.

ಬಿವಾಪುರ್​ ಪೊಲೀಸ್​ ಠಾಣೆ ವ್ಯಾಪ್ತಿಯ ನಂದ್​ ಪೊಲೀಸ್​ ಚೌಕಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ್​ ವಾಲ್ಕೆ ಅಮಾನತುಗೊಂಡ ಪೊಲೀಸ್​ ಹೆಡ್​ ಕಾನ್​ಸ್ಟೆಬಲ್​. ನಾಗ್ಪುರದ ಶಾಲೆಯಲ್ಲಿ ಏರ್ಪಾಡಾಗಿದ್ದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಭದ್ರತೆಗೆ ಪ್ರಮೋದ್​ ನಿಯೋಜಿತನಾಗಿದ್ದ. ಆದರೆ, ಆತ ಮದ್ಯಪಾನ ಮಾಡಿ, ಕರ್ತವ್ಯಕ್ಕೆ ಹಾಜರಾಗಿದ್ದ.

ಮಕ್ಕಳು ನರ್ತಿಸಲು ಆರಂಭಿಸುತ್ತಿದ್ದಂತೆ ವೇದಿಕೆಯನ್ನೇರಿದ ಪ್ರಮೋದ್​, ಮಕ್ಕಳ ಮೇಲೆ ಹಣ ಎಸೆಯಲಾರಂಭಿಸಿದ. ಈ ದೃಶ್ಯ ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದು ಹೇಗೋ ಈ ದೃಶ್ಯ ಸೋರಿಕೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಾಗ್ಪುರ ಪೊಲೀಸ್​ ಅಧಿಕಾರಿಗಳು ಪ್ರಮೋದ್​ನನ್ನು ಅಮಾನತುಗೊಳಿಸಿದ್ದಾರೆ.