ಯುಪಿ ಪೊಲೀಸ್​ ಅಧಿಕಾರಿ ಹತ್ಯೆ ಪ್ರಕರಣ: ಕೋಮುವಾದದ ಛಾಯೆ, ದಾದ್ರಿ ಕೇಸಿನ ನಂಟು

ಬುಲಂದ್​ಶೆಹರ್​: ಉತ್ತರ ಪ್ರದೇಶದ ಬುಲಂದ್​ಶೆಹರ್​ನಲ್ಲಿ ಗೋಹತ್ಯೆ ವಿರುದ್ಧ ನಡೆಯುತ್ತಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಮೃತಪಟ್ಟ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ಉತ್ತರ ಪ್ರದೇಶದ ದಾದ್ರಿ ಎಂಬಲ್ಲಿ 2015ರಲ್ಲಿ ಮನೆಯ ಫ್ರಿಜ್​ನಲ್ಲಿ ದನದ ಮಾಂಸವಿಡಲಾಗಿದೆ ಎಂದು ಆರೋಪಿಸಿ ಮೊಹಮದ್​ ಅಖ್ಲಾಕ್​ ಎಂಬಾತನನ್ನು ಒಂದು ಕೋಮಿನ ಗುಂಪು ಅತ್ಯಂತ ಭೀಕರವಾಗಿ ಹಲ್ಲೆ ಮಾಡಿ ಕೊಂದಿತ್ತು. ಸದ್ಯ ಕೊಲೆಯಾಗಿರುವ ಸುಬೋಧ್​ ಅವರು ದಾದ್ರಿಯ ಆ ಪ್ರಕರಣದ ತನಿಖೆ ನಡೆಸಿದ್ದರು.

ದಾದ್ರಿಯ ಅಖ್ಲಾಕ್​ ಕೊಲೆ ಪ್ರಕರಣ ಗೋಮಾಂಸಕ್ಕೆ ಸಂಬಂಧಿಸಿದ್ದಾಗಿತ್ತು. ನಿನ್ನೆ ಅವರು ಕೊಲೆಯಾಗಿದ್ದೂ ಗೋಹತ್ಯೆಗೆ ಸಂಬಂಧಿಸಿದ ಹೋರಾಟದಲ್ಲಿ. ಹೀಗಾಗಿ ಎರಡೂ ಪ್ರಕರಣಗಳಿಗೂ ಪರಸ್ಪರ ಸಂಬಂಧವಿರುವ ಬಗ್ಗೆ ದೇಶಾದ್ಯಂತ ಅನುಮಾನ ವ್ಯಕ್ತವಾಗಿದೆ. ವಿರೋಧ ಪಕ್ಷಗಳೂ ಇದನ್ನೇ ಪ್ರಶ್ನೆ ಮಾಡಿವೆ.

ದಾದ್ರಿ ಕೇಸ್​ಗೆ ಸೋದರ ಬಲಿ

ಇನ್ನೊಂದೆಡೆ, ದಾದ್ರಿ ಪ್ರಕರಣದ ತನಿಖೆ ಮಾಡಿದ್ದಕ್ಕಾಗಿಯೇ ಸುಬೋಧ್​ ಅವರನ್ನು ಕೊಲ್ಲಲಾಗಿದೆ ಎಂದು ಅವರ ಕುಟುಂಬ ವರ್ಗದವರೂ ಅನುಮಾನ ವ್ಯಕ್ತಪಡಿಸಿದ್ದಾರೆ. ದಾದ್ರಿ ಕೇಸ್​ ನನ್ನ ಸೋದರನ್ನು ಬಲಿ ಪಡೆದಿದೆ ಎಂದು ಅವರ ಸೋದರಿ ಆರೋಪಿಸಿದ್ದಾರೆ. ಇನ್ನೊಂದೆಡೆ ಸುಬೋಧ್​ ಪುತ್ರ ಅಭಿಷೇಕ್​ ಕೂಡ ಹಿಂದು- ಮುಸ್ಲಿಂ ಗಲಾಟೆಗೆ ನನ್ನ ತಂದೆ ಬಲಿಯಾಗಿದ್ದಾರೆ ಎಂದು ನೊಂದು ನುಡಿದಿದ್ದಾರೆ.

ನನ್ನ ಪತಿಯ ವಿರುದ್ಧ ದಾಳಿ ನಡೆದದ್ದು ಇದೇ ಮೊದಲಲ್ಲ. ಎರಡು ಬಾರಿ ಅವರಿಗೆ ಗುಂಡೇಟು ತಗುಲಿತ್ತು. ಅವರ ಹತ್ಯೆಗೆ ಪ್ರಯತ್ನಗಳು ನಡೆಯುತ್ತಲೇ ಇದ್ದವು ಎಂದು ಸುಬೋಧ್​ ಪತ್ನಿ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 300 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೇಶ್​ ರಾಜ್​ ತಲೆ ಮರೆಸಿಕೊಂಡಿದ್ದಾನೆ ಎಂದು ಎಡಿಜಿಪಿ ಆನಂದ್​ಕುಮಾರ್​ ತಿಳಿಸಿದ್ದಾರೆ.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಇತ್ತ, ಮೃತ ಸುಬೋಧ್​ ಕುಮಾರ್​ ಸಿಂಗ್​ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರ ಗೌರವಗಳೊಂದಿಗೆ ಮಂಗಳವಾರ ನೆರವೇರಿಸಲಾಯಿತು.

ಯಾರು, ಏನಂತಾರೆ?

ನನ್ನ ಪತಿ ನಿಷ್ಠಾವಂತ ಅಧಿಕಾರಿ. ಅವರು ಎಲ್ಲಾ ಜವಾಬ್ದಾರಿಯನ್ನು ತಮ್ಮ ಮೇಲೆ ಹಾಕಿಕೊಳ್ಳುತ್ತಿದ್ದರು. ಅವರ ಮೇಲೆ ದಾಳಿ ನಡೆದದ್ದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಎರಡು ಬಾರಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈಗ ಅವರಿಗೆ ಯಾರೂ ನ್ಯಾಯ ಕೊಡುತ್ತಿಲ್ಲ. ಅವರನ್ನು ಕೊಂದವರನ್ನು ಗಲ್ಲಿಗೇರಿಸಿದರಷ್ಟೇ ನ್ಯಾಯ ಸಿಕ್ಕಂತಾಗುತ್ತದೆ.
|ಪೊಲೀಸ್​ ಅಧಿಕಾರಿ ಸುಬೋಧ್​ ಪತ್ನಿ

ನಾನೊಬ್ಬ ಉತ್ತಮ ನಾಗರಿಕನಾಗಬೇಕೆಂಬುದಷ್ಟೇ ನನ್ನ ತಂದೆಯ ಇಚ್ಛೆಯಾಗಿತ್ತು. ಧಾರ್ಮಿಕ ಘರ್ಷಣೆಗಳು ಸಮಾಜದಲ್ಲಿ ನಡೆಯಬಾರದೆಂಬುದು ಅವರ ಆಶಯವಾಗಿತ್ತು. ಹಿಂದು-ಮುಸ್ಲಿಂ ಗಲಾಟೆಯಲ್ಲಿ ನನ್ನ ತಂದೆ ಸಾವಿಗೀಡಾಗಿದ್ದಾರೆ. ಇಂಥ ಗಲಭೆಗಳು ಇನ್ನು ಎಷ್ಟು ಜನರ ತಂದೆಯರನ್ನು ಬಲಿಪಡೆಯುವುದೋ?
|ಅಭಿಷೇಕ್​, ಸುಬೋಧ್ ಪುತ್ರ

ನನ್ನ ಸೋದರ ದಾದ್ರಿಯ ಅಖ್ಲಾಕ್​ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದರು. ಆದ್ದರಿಂದಲೇ ಅವರನ್ನು ಕೊಲ್ಲಲಾಗಿದೆ. ಪೊಲೀಸ್​ ಇಲಾಖೆಯೇ ಅವರ ವಿರುದ್ಧ ಪಿತೂರಿ ಮಾಡಿದೆ. ಅವರನ್ನು ಹುತಾತ್ಮ ಎಂದು ಘೋಷಿಸಿ ಅವರ ಸ್ಮಾರಕ ನಿರ್ಮಿಸಬೇಕು. ನಮಗೆ ಹಣ ಬೇಕಿಲ್ಲ. ಮುಖ್ಯಮಂತ್ರಿ ಇನ್ನೂ ಹಸು ಹಸು ಹಸು ಎನ್ನುತ್ತಲೇ ಇದ್ದಾರೆ.
|ಸುಬೋಧ್​ ಸೋದರಿ

ಅಲ್ಪಸಂಖ್ಯಾತರು ಹೆಚ್ಚಿಲ್ಲದ ಬುಲಂದ್​ಶೆಹರ್​ನಲ್ಲಿ ಹಸುಗಳ ಕಳೆಬರ ಸಿಕ್ಕಿದ್ದು ಹೇಗೆ? ಅದು ಅಲ್ಲಿಗೆ ಹೇಗೆ ಬಂತು. ಈ ಕುರಿತು ಪೊಲೀಸರು ತನಿಖೆ ನಡೆಸಬೇಕು.
|ಅಜಂಖಾನ್​, ಎಸ್​ಪಿ ಮುಖಂಡ

ರಾಜ್ಯವೊಂದರಲ್ಲಿ ನಾಗರಿಕರು ಕಾನೂನು ಕೈಗೆತ್ತಿಕೊಂಡಿದ್ದು ದಿಗ್ಭ್ರಮೆ ಮೂಡಿಸಿದೆ. ಕಾನೂನನ್ನು ಕೈಗೆತ್ತಿಕೊಳ್ಳಲು ಅಧಿಕಾರ ಕೊಟ್ಟವರಾರು. ಉತ್ತರ ಪ್ರದೇಶದಲ್ಲಿ ಹೀಗಾಗಿದ್ದರೂ, ಸಿಎಂ ಯೋಗಿ ಆದಿತ್ಯನಾಥ್​ ಮಾತ್ರ ತೆಲಂಗಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
|ಕಪಿಲ್​ ಸಿಬಲ್​, ಕಾಂಗ್ರೆಸ್​ ನಾಯಕ

ಕಸಾಯಿಖಾನೆ ವಿರುದ್ಧ ಹೋರಾಡುತ್ತಿದ್ದವರ ದಾಳಿಗೆ ಪೊಲೀಸ್​ ಅಧಿಕಾರಿ ಸೇರಿ ಇಬ್ಬರ ಬಲಿ