ಅತ್ಯಾಚಾರ ಪ್ರಕರಣ ಹಿಂಪಡೆಯಲು ಬಂದ ಯುವತಿ ಮೇಲೆ ಪೊಲೀಸಪ್ಪನಿಂದ ಅತ್ಯಾಚಾರ

ಥಾಣೆ: ಸ್ನೇಹಿತನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ಹಿಂಪಡೆಯಲು ಬಂದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸ್‌ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.

23 ವರ್ಷದ ಯುವತಿ ತಾನು ಈ ಮೊದಲು ತನ್ನ ಸ್ನೇಹಿತನ ಮೇಲೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ಹಿಂಪಡೆಯಲು ಠಾಣೆಗೆ ಬಂದಿದ್ದ ವೇಳೆ ಪೊಲೀಸ್‌ ಅಧಿಕಾರಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ರೋಹನ್‌ ಗೊಂಜಾರಿ ವಿರುದ್ಧ ಐಪಿಸಿ ಸೆಕ್ಷನ್‌ 376 ಅತ್ಯಾಚಾರ ಮತ್ತು 506 ಕ್ರಿಮಿನಲ್‌ ಬೆದರಿಕೆ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿಲ್ಲ.

ಯುವತಿ ಮೊದಲಿಗೆ ಮುಂಬೈನ ಮಾಕುರ್ದ್‌ ಪೊಲೀಟ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಅದು ಭಿವಾಂಡಿಯ ಶಾಂತಿನಗರ್‌ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿತ್ತು.

ಆರೋಪಿ ಮತ್ತು ನಾನು ಇಬ್ಬರು ಸ್ನೇಹಿತರಾಗಿದ್ದರಿಂದ ಅತ್ಯಾಚಾರ ಪ್ರಕರಣ ಹಿಂಪಡೆಯಲು ನಿರ್ಧರಿಸಿದ್ದೆ. ದೂರನ್ನು ಹಿಂಪಡೆಯಲು ಯುವತಿ ಠಾಣೆಗೆ ತೆರಳಿದಾಗ ಶಾಂತಿನಗರ ಠಾಣೆ ಎಸ್‌ಐ ಗೊಂಜಾರಿ, ನಿನ್ನ ಗೆಳೆಯನನ್ನು ಬಿಡುಗಡೆ ಮಾಡುತ್ತೇನೆ ಮತ್ತು ಆ. 16ರಂದು ರಂಜೋಲಿ ಬೈಪಾಸ್‌ ಬಳಿ ನನ್ನನ್ನು ಭೇಟಿಯಾಗು ಎಂದರು. ಬಳಿಕ ಕಲ್ಯಾಣ್‌ ಟೌನ್‌ನ ಅತಿಥಿ ಗೃಹವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ನ. 21ರಂದು ಈ ಕುರಿತು ಕೊಂಗೊನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)