ಧೈರ್ಯದಿಂದ ಪರಿಸ್ಥಿತಿ ಎದುರಿಸಿ ಜೀವನ ರೂಪಿಸಿಕೊಳ್ಳಿ

 • ಮಡಿಕೇರಿ: ಕೊಡಗು ಜಲಪ್ರಳಯದಲ್ಲಿ ಸಂತ್ರಸ್ತರಾದ 50 ಜನರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಕಾರದಲ್ಲಿ ತಲಾ 20 ಸಾವಿರ ರೂ.ನಂತೆ ಒಟ್ಟು 10 ಲಕ್ಷ ಆರ್ಥಿಕ ನೆರವನ್ನು ಭಾನುವಾರ ನೀಡಲಾಯಿತು.
  ನಗರದ ಕೂರ್ಗ್ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ಎಸ್.ಶೆಟ್ಟಿ.ಸುಧಾಕರ, ಕೊಡಗಿನವರು ಎಂದೂ ಏನನ್ನೂ ಕೇಳಿದವರಲ್ಲ. ಆದರೆ ಮಹಾಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿ ನೆರವು ಕೇಳುವ ಸ್ಥಿತಿ ತಲುಪಿದ್ದಾರೆ. ಸಂತ್ರಸ್ತರು ಧೈರ್ಯದಿಂದ ಪರಿಸ್ಥಿತಿ ಎದುರಿಸಿ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕಿದೆ. ನಕಾರಾತ್ಮಕ ಚಿಂತನೆ ಬದಿಗಿಟ್ಟು ಹೊಸ ಜೀವನದ ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
  ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲಕ ಅಗತ್ಯ ಯೋಜನೆಯ ನೆರವನ್ನು ಪಕ್ಷಾತೀತವಾಗಿ ನೀಡಲು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮುಂದಾಗಲಿದೆ. ಸಂತ್ರಸ್ತರ ಮಕ್ಕಳಿಗೆ ಸೂಕ್ತ ಶಿಕ್ಷಣಕ್ಕೂ ಅಗತ್ಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
  ಕೊಡಗಿನಲ್ಲಿ ಕುಸಿದಿರುವ ಪ್ರವಾಸೋದ್ಯಮ ಕ್ಷೇತ್ರದ ಚೇತರಿಕೆಗೂ ಅಗತ್ಯ ಕ್ರಮಕೈಗೊಳ್ಳಲಾಗುವುದು. ವಾಣಿಜ್ಯೋದ್ಯಮಿಗಳು ಹಾಗೂ ಸರ್ಕಾರದ ಮಧ್ಯೆ ಎಫ್.ಕೆ.ಸಿ.ಸಿ.ಐ. ಸೌಹಾರ್ದ ಸೇತುವಂತೆ ಕಾರ್ಯನಿರ್ವಹಿಸಲಿದೆ. ಕರ್ನಾಟಕದಲ್ಲಿನ ವ್ಯಾಪಾರಿ ಸಮುದಾಯವು ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
  ರಾಜ್ಯ ಎಫ್.ಕೆ.ಸಿ.ಸಿ.ಐ ಸದಸ್ಯ ಕೆ.ಬಿ.ಗಿರೀಶ್ ಗಣಪತಿ ಮಾತನಾಡಿ, ರಾಜ್ಯ ಸಂಘದಿಂದ ನೀಡಲಾಗುತ್ತಿರುವ ಪರಿಹಾರ ಪ್ರಾರಂಭಿಕ ಹಂತದ್ದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವರ್ತಕರ ನೆರವಿನಿಂದ ಮತ್ತಷ್ಟು ಆರ್ಥಿಕ ನೆರವನ್ನು ಕೊಡಗಿನ ಸಂತ್ರಸ್ತರಿಗೆ ಕಲ್ಪಿಸಲು ಬದ್ಧ ಎಂದು ಹೇಳಿದರು.
  ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್.ಪ್ರಕಾಶ್, ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ.ರಾಜೇಂದ್ರ, ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಮೋಂತಿಗಣೇಶ್, ರಾಜ್ಯ ಚೇಂಬರ್ ಪ್ರಮುಖರಾದ ಪಿ.ಸಿ.ರಾವ್, ಬಿ.ಎಂ.ಸಂಕಪ್ಪ, ಜಿಲ್ಲಾ ಚೇಂಬರ್ ಪ್ರಮುಖರಾದ ಶ್ಯಾಮ್ ಪ್ರಸಾದ್, ಬಿ.ಆರ್.ನಾಗೇಂದ್ರ ಪ್ರಸಾದ್, ರವಿಬಸಪ್ಪ, ಬಾಬುಚಂದ್ರ ಉಳ್ಳಾಗಡ್ಡಿ, ಬಿ.ಕೆ.ಅರುಣ್ ಕುಮಾರ್, ಅರುಣ್ ಅಪ್ಪಚ್ಚು, ಕೆ.ಸುರೇಶ್ ಇತರರು ಹಾಜರಿದ್ದರು.
  ಕೊಡಗಿನ ಸಂತ್ರಸ್ತರಿಗೆ 10 ಲಕ್ಷ ರೂ. ಆರ್ಥಿಕ ನೆರವು ನೀಡಿದ ರಾಜ್ಯ ಚೇಂಬರ್ ಅಧ್ಯಕ್ಷ ಎಸ್.ಸುಧಾಕರ ಶೆಟ್ಟಿ ಅವರನ್ನು ಜಿಲ್ಲಾ ಚೇಂಬರ್ ವತಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *