ಸಾಸ್ವೆಹಳ್ಳಿ: ಗಮನಕ್ಕೆ ಬಾರದಂತೆ ತಮ್ಮ ಜಮೀನಿನ ಮೇಲೆ ಬೆಳೆ ಸಾಲ ಮಂಜೂರು ಮಾಡಿ, ಆ ಹಣವನ್ನು ವಿಎಸ್ಎಸ್ಎನ್ ಕಾರ್ಯದರ್ಶಿ ಜಿ.ಕೆ.ರಾಜು ಡಿಸಿಸಿ ಬ್ಯಾಂಕ್ನಲ್ಲಿ ಡ್ರಾ ಮಾಡಿಕೊಂಡಿದ್ದಾರೆ ಎಂದು ರೈತ ಎಚ್.ಕೆ. ಸತೀಶ್ ಆರೋಪಿಸಿದರು.

ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮದ ಬ್ಯಾಂಕ್ ಆವರಣದಲ್ಲಿ ಹೊನ್ನಾಳಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ನವೀನ್ಕುಮಾರ್ ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸುರೇಶ್ ಅವರ ಸಮ್ಮುಖದಲ್ಲಿ ನಡೆದ ಆಡಳಿತ ಮಂಡಳಿ ಮತ್ತು ಶೇರುದಾರರ ಸಭೆಯಲ್ಲಿ ಮಾತನಾಡಿದರು.
2023 -24ರಲ್ಲಿ 1 ಲಕ್ಷ ರೂ. ಬೆಳೆ ಸಾಲ ಪಡೆದು ಸಾಲದ ಹಣ ಜಮೆ ಮಾಡಿ ಬ್ಯಾಂಕಿನಿಂದ ಕ್ಲಿಯರೆನ್ಸ್ ಪಡೆದಿದ್ದೆ, ಆದರೆ 2024-25 ನೇ ಸಾಲಿನಲ್ಲಿ ನನ್ನ ಗಮನಕ್ಕೆ ಬಾರದೆ ನನ್ನ ಜಮೀನಿನ ಮೇಲೆ 1 ಲಕ್ಷ ರೂ. ಸಾಲ ಮಂಜೂರಾಗಿ, ವಿಎಸ್ಎಸ್ಎನ್ ಬ್ಯಾಂಕಿನ ಮೂಲ ಬ್ಯಾಂಕ್ ಡಿಸಿಸಿ ಬ್ಯಾಂಕ್ನಲ್ಲಿರುವ ನನ್ನ ಖಾತೆಗೆ ಹಣ ಜಮೆಯಾಗಿದೆ. ಚೆಕ್ಗೆ ನಕಲಿ ಸಹಿ ಮಾಡಿ ಆ ಹಣ ತೆಗೆಯಲಾಗಿದೆ. ಕಾರ್ಯದರ್ಶಿ ಬೆಳೆ ಸಾಲ ಮಂಜೂರು ಮಾಡಿದ್ದೇಕೆ? ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿದ್ದು ಯಾರು? ಎಂಬುದು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಆಡಳಿತ ಮಂಡಳಿಯ ಸಹಮತದಿಂದ ಬ್ಯಾಂಕಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ಲಿಖಿತ ರೂಪದಲ್ಲಿ ದಾವಣಗೆರೆಯ ಸಹಕಾರ ಸಂಘಗಳ ಸಹಾಯಕ (ಎಆರ್) ನಿಬಂಧಕರಿಗೆ ತನಿಖೆಗೆ ಹಾಗೂ ಸೂಕ್ತ ಕ್ರಮಕ್ಕಾಗಿ ಪತ್ರ ಬರೆಯಲು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತೀರ್ವನಿಸಿದರು. ಜತೆಗೆ ಆರೋಪಿತ ರೈತನಿಂದ ದೂರು ಪಡೆದು, ಅದನ್ನು ಎಆರ್ ಅವರಿಗೆ ನೀಡಲು ತಿಳಿಸಿದರು.
ಆರೋಪಿತ ಕೆ.ಜಿ. ರಾಜು ಆರೋಗ್ಯದ ಸಮಸ್ಯೆ ಹೇಳಿಕೊಂಡು ಸಭೆಗೆ ಬಂದಿಲ್ಲ ಎಂದು ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ರಂಗಪ್ಪ ತಿಳಿಸಿದರು.
ಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಶೇರುದಾರರು ಇದ್ದರು.