ಶಿರಸಿ: ಕಳೆದ 33 ವರ್ಷಗಳಿಂದ ನಡೆದಿರುವ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಈಗ ನಿರ್ಣಾಯಕ ಹಂತದಲ್ಲಿದೆ. ಹೋರಾಟದ ಸಾರ್ಥಕತೆಗೆ ಎಲ್ಲರೂ ಸಹಕಾರ, ಮತ್ತು ಪ್ರಯತ್ನ ಅಗತ್ಯ. ಇಲ್ಲದಿದ್ದರೆ ಅರಣ್ಯವಾಸಿಗಳು ಅತಂತ್ರರಾಗುವ ಸ್ಥಿತಿ ಬರಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ನಗರದ ಅರಣ್ಯ ಹಕ್ಕು ಸ್ಥಳಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಸೋಮವಾರ ಏರ್ಪಾಟಾಗಿದ್ದ ನ. 7ರ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ ಶೇ. 2ರಷ್ಟು ಅರ್ಜಿದಾರರಿಗೆ ಮಾತ್ರ ಹಕ್ಕು ಪತ್ರ ದೊರಕಿದೆ. ಶೇ. 73ರಷ್ಟು ಅರ್ಜಿಗಳು ಪ್ರಥಮ ಹಂತದಲ್ಲಿ ತಿರಸ್ಕರಿಸಲಾಗಿದೆ. ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನದ ಅಡಿಯಲ್ಲಿ ಶಿರಸಿ ತಾಲೂಕಿನಲ್ಲಿ 60 ಸಾವಿರಕ್ಕೂ ಹೆಚ್ಚಿನವರಿಗೆ ಉಚಿತವಾಗಿ ಜಿಪಿಎಸ್ ಮೇಲ್ಮನವಿ ಕಾರ್ಯ ನಡೆಸಲಾಗಿದೆ. ಕಳೆದ 33 ವರ್ಷದಿಂದ ಹೋರಾಟಕ್ಕೆ ಜರುಗುತ್ತಿದ್ದರೂ, ಅತಿಕ್ರಮಣದಾರರಿಗೆ ನ್ಯಾಯ ಸಿಗದೇ ಇರುವುದು ವಿಷಾದಕರ. ಇಂದು ಹೋರಾಟವು ತಾರ್ತಿಕ ಹಂತಕ್ಕೆ ತಲುಪಿದ್ದು, ಈ ಹಂತದಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ನೆಹರು ನಾಯ್ಕ ಬಿಳೂರು, ನಾಗರಾಜ ಎಸ್. ದೇವಸ್ಥಳ ಅಚನಳ್ಳಿ, ರಾಜು ನರೇಬೈಲ್, ಇಬ್ರಾಹಿಂ ಗೌಡಳ್ಳಿ, ಎಂ.ಆರ್. ನಾಯ್ಕ ಕಂಡ್ರಾಜಿ, ಮಲ್ಲೇಶಿ ಬದನಗೋಡ, ಸ್ವಾತಿ ಜೈನ್, ಚಂದ್ರಶೇಖರ ಶಾನಭಾಗ ಬಂಡಲ, ಇತರರಿದ್ದರು.