ವೈದ್ಯರು ಮಾನವೀಯ ಕಳಕಳಿ ಹೊಂದಲಿ

ಬಾಗಲಕೋಟೆ: ರೋಗಿಯ ಆರೈಕೆ ಮಾಡುವಾಗ ಮಾನವೀಯ ಕಳಕಳಿ ತೋರುವ ವೈದ್ಯ ಮಾತ್ರ ಯಶಸ್ವಿ ವ್ಯೆದ್ಯನಾಗಬಲ್ಲ ಎಂದು ಮಂಗಳೂರು ಯನ್​ಪೋಯಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಸಿ.ವಿ. ರಘುವೀರ ಹೇಳಿದರು.

ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ದಿ. ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಹಾಗೂ ಸ್ನಾತ ಕೋತ್ತರ ಪದವೀಧರರಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ವೈದ್ಯರಿಗೆ ನಿರಂತರ ಕಲಿಕೆ ಹಾಗೂ ವೃತ್ತಿ ಬದ್ಧತೆ ಅಗತ್ಯವಿದೆ. ಅಧ್ಯಯನದೊಂದಿಗೆ ಜ್ಞಾನ ವೃದ್ಧಿಸಿಕೊಂಡು ಗುಣಮಟ್ಟದ ಸೇವೆ, ಸಮಾಜಮುಖಿ ಸೇವೆ ಮೂಲಕ ವೃತ್ತಿಪರತೆಯ ಘನತೆ ಹೆಚ್ಚಿಸಬೇಕೆಂದು ಹೇಳಿದರು. ಪದವಿ ಪಡೆದಾಕ್ಷಣ ಕಲಿಕೆ ಅಂತ್ಯವಾಗುವುದಿಲ್ಲ. ಅದು ನಿರಂತರ ಪ್ರಕ್ರಿಯೆಯಾಗಿರಬೇಕು. ಸತತ ಅಧ್ಯಯನ, ಸಂಶೋಧನಾ ಪ್ರವೃತ್ತಿ ಮೂಲಕ ಅದರ ಲಾಭ ಸಮಾಜಕ್ಕೆ ದೊರಕುವಂತೆ ಮಾಡಬೇಕು ಎಂದರು.

ಇಂದಿನ ದಿನಮಾನಗಳಲ್ಲಿ ಮೊಬೈಲ್ ಜಗತ್ತನ್ನೆ ಆಳುತ್ತಿದೆ. ಇದರಿಂದ ಓದುವ ಅಭಿರುಚಿ ಯುವ ಸಮೂಹದಲ್ಲಿ ಕ್ಷೀಣಿಸುತ್ತಿದೆ. ಮೊಬೈಲ್ ದಾಸರರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆಧುನಿಕ ಜಗತ್ತಿನಲ್ಲಿ ತಂದೆ, ತಾಯಿಗೆ ಪ್ರೀತಿ, ಗೌರವ ನೀಡುವುದನ್ನು ಯುವ ಸಮೂಹ ಮರೆಯುತ್ತಿರುವುದು ಖೇದಕರ ಸಂಗತಿ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಬಿವಿವಿ ಸಂಘದ ಕೊಡುಗೆ ಅಪಾರವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದೆ. ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ. ವೀರಣ್ಣ ಚರಂತಿಮಠ ಅವರ ದೂರದೃಷ್ಟಿ ಮಾದರಿಯಾಗಿದೆ ಎಂದರು. 100 ಯುಜಿ ಹಾಗೂ 13 ಪಿಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅಧ್ಯಕ್ಷತೆ ವಹಿಸಿದ್ದರು. ವ್ಯೆದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ್, ಡಾ. ನಾಗರಾಜ ಕಲಬುರ್ಗಿ, ಡಾ. ಪುರಾಣಿಕ, ಡಾ. ರವಿರಾಜ ದೇಸಾಯಿ, ಡಾ. ಪ್ರಹ್ಲಾದ ಸರಾಫ್ ಉಪಸ್ಥಿತರಿದ್ದರು.