ಬಸವಕಲ್ಯಾಣ: ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಜನರ ಮನೆಗೆ ಮುಟ್ಟಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದರು.

ಜಿಲ್ಲಾಡಳಿತ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಡಿ ಲಾಡವಂತಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವೆಡೆ ತಾಂತ್ರಿಕ ತೊಂದರೆಯಿಂದ ಯೋಜನೆಯಿಂದ ಕೆಲವರು ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಅವರನ್ನು ಗುರುತಿಸಿ ಮನೆ ಬಾಗಿಲಿಗೆ ಗ್ಯಾರಂಟಿಗಳನ್ನು ಮುಟ್ಟಿಸುವುದೇ ಈ ಸಮಾವೇಶದ ಆಶಯ ಎಂದರು.
ಪಂಚ ಗ್ಯಾರಂಟಿಗಳ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಡವರು ಹಾಗೂ ಹಿಂದುಳಿದ ಯಾರೊಬ್ಬರೂ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗ್ರಾಮೀಣ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವಂಚಿತ ಫಲಾನುಭವಿಗಳ ಪಟ್ಟಿ ಮಾಡಿ ವರದಿ ಸಲ್ಲಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಪಂ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಫಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕೃಷ್ಣಾ ತಳಮುಡೆ, ಉಪಾಧ್ಯಕ್ಷೆ ಅನುರಾಧಾ ಪಾಟೀಲ್ ಇತರರಿದ್ದರು.