ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಜರುಗಿತು. 41 ಪಿಎಚ್.ಡಿ, 197 ಸ್ನಾತಕೋತ್ತರ ಹಾಗೂ 625 ಸ್ನಾತಕ ಪದವಿಗಳನ್ನೊಳಗೊಂಡು 836 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು.
ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಚೆರುಕಮಲ್ಲಿ ಶ್ರೀನಿವಾಸ ರಾವ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಕೃಷಿ ಪದವೀಧರ ವಿದ್ಯಾರ್ಥಿಗಳು ಉದ್ಯೋಗದಾತರಾಗಬೇಕು. ಕೃಷಿಯಲ್ಲಿ ತಾಂತ್ರಿಕತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆಯಾಗುವಂತೆ ಸಂಶೋಧನೆ ಮಾಡಬೇಕು ಎಂದು ಡಾ. ರಾವ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಘಟಿಕೋತ್ಸವ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದವಿ, ಚಿನ್ನದ ಪದಕ ವಿತರಿಸಿb ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹಿನ್ನಡೆ, ಹಾನಿ ಆಗುತ್ತಿದೆ. ಕೃಷಿ ಪದವೀಧರರು ಸಂಶೋಧನೆ ಹಾಗೂ ವಿನೂತನ ಪ್ರಯೋಗಗಳ ಮೂಲಕ ಕೃಷಿ ಕಾರ್ಯಕ್ಕೆ ಬಲ ತುಂಬಬೇಕು. ಕೃಷಿ ವಲಯ ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಂಡುಹಿಡಿಯಬೇಕು ಎಂದರು.
ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ವಾರ್ಷಿಕ ವರದಿ ಮಂಡಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾವಿಷಯಕ್ ಪರಿಷತ್‌ನ ಸದಸ್ಯರು, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಐಶ್ವರ್ಯ- ಕಾರ್ತಿಕ್ ಚಿನ್ನದ ಬೇಟೆ:
ಘಟಿಕೋತ್ಸವದಲ್ಲಿ ಕಾರ್ತಿಕ್ ಚಿಗರಿ ಹಾಗೂ ಐಶ್ವರ್ಯ ಬಸರಿಕಟ್ಟಿ ಅವರು ಬಿಎಸ್.ಸಿ (ಆನರ್ಸ್) ಕೃಷಿಯಲ್ಲಿ ಸಮಾನ ಅಂಕ ಗಳಿಸಿ ತಲಾ 4 ಚಿನ್ನದ ಪದಕ ಪಡೆದು ಚಿನ್ನದ ಹುಡುಗ- ಹುಡುಗಿಯಾಗಿ ಹೊರಹೊಮ್ಮಿದರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಐಶ್ವರ್ಯ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ತಿಳವಳ್ಳಿ ಗ್ರಾಮದ ಕಾರ್ತಿಕ್ ಚಿಗರಿ ಅವರು ಬಿಎಸ್.ಸಿ (ಆನರ್ಸ್) ಕೃಷಿ ವಿಷಯದಲ್ಲಿ ಕೃಷಿ ವಿವಿ ಚಿನ್ನದ ಪದಕ, ಸೀತಾರಾಂ ಜಿಂದಾಲ್ ಪ್ರತಿಷ್ಠಾನದ ಚಿನ್ನದ ಪದಕ, ಡಾ. ಜೆ.ವಿ. ಗೌಡ ಅಭಿನಂದನಾ ಸಮಿತಿ ಚಿನ್ನದ ಪದಕ ಹಾಗೂ ಡಾ. ಎಸ್.ವಿ. ಪಾಟೀಲ ಸ್ಮರಣಾರ್ಥ ಚಿನ್ನದ ಪದಕ ಪಡೆದರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ:
ಘಟಿಕೋತ್ಸವದಲ್ಲಿ ಮೂವರು ಸಾಧಕ, ಪ್ರಗತಿಪರ ರೈತರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಶಂಕರ ಲಂಗಟಿ, ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಡಿ.ಟಿ. ಪಾಟೀಲ ಮತ್ತು ಹಾವೇರಿ ಜಿಲ್ಲೆ ಮುತ್ತಣ್ಣ ಪೂಜಾರ ಅವರ ಕೃಷಿಯಲ್ಲಿನ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.