ಕೇಂದ್ರ ತಂಡಕ್ಕೆ ಬರ ಸ್ಥಿತಿ ಮನವರಿಕೆ ಮಾಡಿ

ಧಾರವಾಡ: ರಾಜ್ಯ ಸರ್ಕಾರ ಸಲ್ಲಿಸಿರುವ ವರದಿ ಆಧರಿಸಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ನ. 17ರಂದು ಜಿಲ್ಲೆಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಲಿದೆ. ಕೃಷಿ, ತೋಟಗಾರಿಕೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೇಂದ್ರ ತಂಡಕ್ಕೆ ಅಗತ್ಯ ಸಹಕಾರ ನೀಡಬೇಕು. ಅತಿ ಹೆಚ್ಚು ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಕರೆದೊಯ್ಯಬೇಕು. ಇದರಿಂದ ಬರಪೀಡಿತ ಪ್ರದೇಶ ಘೊಷಣೆ ಹಾಗೂ ರೈತರಿಗೆ ಅಗತ್ಯ ನೆರವು ಸಿಗಲು ಸಾಧ್ಯವಾಗುತ್ತದೆ ಎಂದು ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನವಲಗುಂದ ಹಾಗೂ ಹುಬ್ಬಳ್ಳಿ ತಾಲೂಕುಗಳು ಬರಪೀಡಿತವಾಗಿವೆ. ಕಲಘಟಗಿ, ಕುಂದಗೋಳ ತಾಲೂಕಿನಲ್ಲೂ ಭಾಗಶಃ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ಹಾಗಾಗಿ ಈಗಿನಿಂದಲೇ ಮೇವು ಬ್ಯಾಂಕ್, ಗೋಶಾಲೆ ತೆರೆಯುವ ಸಂಬಂಧ ಅಗತ್ಯ ತಯಾರಿ ನಡೆಸಬೇಕು ಎಂದು ಅಧ್ಯಕ್ಷರು ಪಶು ಸಂಗೋಪನೆ ಇಲಾಖೆ ಅಧಿಕಾರಿ ವಿಶಾಲ ಅಡಳ್ಳಿಕರಗೆ ಸೂಚಿಸಿದರು.

ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಕೇಂದ್ರ ತಂಡ ಆಗಮಿಸಿ ಸಮೀಕ್ಷೆ ನಡೆಸಿದ ನಂತರ ಬರಪೀಡಿತ ಎಂದು ಘೊಷಿಸಿದ ನಂತರವೇ ಮೇವು ಬ್ಯಾಂಕ್ ತೆರೆಯಬಹುದು. ತೀರ ಮೇವಿನ ಅಭಾವವಿದ್ದಲ್ಲಿ ಗೋಶಾಲೆ ತೆರೆಯಬಹುದು. ರಾಯಚೂರು, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಉತ್ತಮ ಗುಣಮಟ್ಟದ ಮೇವು ಖರೀದಿಸಿ ಮೇವು ಬ್ಯಾಂಕ್​ಗಳಿಗೆ ಪೂರೈಸಬಹುದು. ಹಾಗಾಗಿ ಈಗಿನಿಂದಲೇ ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಮೇವಿನ ಬೇಡಿಕೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗೆ ಸೂಚಿಸಿದರು.

2016 17, 2017- 18ನೇ ಸಾಲಿನ ಬೆಳೆ ವಿಮೆ ಇನ್ನೂ ರೈತರ ಖಾತೆಗಳಿಗೆ ಜಮೆಯಾಗುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಲ್ಲಪ್ಪ ಪುಡಕಲಕಟ್ಟಿ, ನಿಂಗಪ್ಪ ಘಾಟಿನ ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ಹಣ ಹಂತಹಂತವಾಗಿ ಜಮೆಯಾಗುತ್ತಿದೆ ಎಂಬ ಸಿದ್ಧ ಉತ್ತರ ನೀಡಿದರು.

ಉಪಾಧ್ಯಕ್ಷ ಶಿವಾನಂದ ಕರಿಗಾರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಲ್ಲಪ್ಪ ಪುಡಕಲಕಟ್ಟಿ, ನಿಂಗಪ್ಪ ಘಾಟಿನ, ಚನ್ನವ್ವ ಶಿವನಗೌಡರ, ಸಿಇಒ ಡಾ. ಬಿ.ಸಿ. ಸತೀಶ ವೇದಿಕೆಯಲ್ಲಿದ್ದರು.

ಆರ್​ಒ ಘಟಕ ಭೇಟಿ ಎಂದು?: ಹಿಂದಿನ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಶುದ್ಧ ಕುಡಿಯುವ ನೀರು ಘಟಕಗಳಿಗೆ ಭೇಟಿ ನೀಡಲು ನ. 5ರ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಸದಸ್ಯರನ್ನು ಭೇಟಿಗೆ ಕರೆದುಕೊಂಡು ಹೋಗಲಿಲ್ಲ ಏಕೆ? ಎಂದು ಉಪಾಧ್ಯಕ್ಷ ಶಿವಾನಂದ ಕರಿಗಾರ, ಆರ್​ಡಬ್ಲುಎಸ್ ಇಲಾಖೆ ಇಂಜಿನಿಯರ್ ಮನೋಹರ ಮಂಡೋಲಿ ಅವರನ್ನು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಸಿಇಒ ಸತೀಶ, ಹಿಂದೆ ಎಲ್ಲೆಲ್ಲಿ ಘಟಕ ನಿರ್ವಿುಸಲಾಗಿತ್ತು? ಯಾವ ಏಜೆನ್ಸಿ? ಅನುದಾನದ ವಿವರಗಳನ್ನು ಕೂಡಲೇ ಸಲ್ಲಿಸಬೇಕು ಎಂದು ಮಂಡೋಲಿ ಅವರಿಗೆ ಸೂಚಿಸಿದರು.

ಎಪಿಎಂಸಿ ಖಾಲಿ ಖಾಲಿ: ಇತ್ತೀಚೆಗೆ ಹೊಸ ಎಪಿಎಂಸಿಗೆ ಭೇಟಿ ನೀಡಿದ್ದಾಗ ಖಾಲಿ ಖಾಲಿ ಹೊಡೆಯುತ್ತಿತ್ತು. ಅಂಗಡಿಗಳ ಮುಂದೆ ವಾಹನಗಳೂ ಇಲ್ಲ, ರೈತರ ಫಸಲೂ ಕಾಣಲಿಲ್ಲ. ಅದು ಎಪಿಎಂಸಿಯೋ? ಅಥವಾ ಗೋದಾಮೋ ಎಂಬ ಪ್ರಶ್ನೆ ಮೂಡುವಂತಿತ್ತು. ಆದರೂ ಶೇ. 86ರಷ್ಟು ಗುರಿ ಸಾಧಿಸಿದ್ದೇವೆ ಎಂದು ಅಂಕಿ- ಅಂಶ ನಮೂದಿಸಿದ್ದೀರಿ. ಇದು ಹೇಗೆ ಸಾಧ್ಯ? ಎಂದು ಜಿ.ಪಂ. ಸಿಇಒ ಡಾ. ಸತೀಶ, ಕೃಷಿ ಮಾರುಕಟ್ಟೆ ಅಧಿಕಾರಿಯನ್ನು ಪ್ರಶ್ನಿಸಿದರು.