More

    ಬಿಎಸ್ಸಿ ಕೋರ್ಸ್‌ಗೆ ಬೋಧಕರು-ಲ್ಯಾಬ್ ಕೊರತೆ

    ಕಂಪ್ಲಿ: ಪ್ರಯೋಗಾಲಯ ಹಾಗೂ ಬೋಧಕರ ಕೊರತೆಯಿಂದಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವರ್ಷಗಳು ಉರುಳುತ್ತಿದ್ದರೂ ಬಿಎಸ್ಸಿ ಕೋರ್ಸ್ ಆರಂಭವಾಗುತ್ತಿಲ್ಲ. ಹೀಗಾಗಿ ಪ್ರವೇಶವೂ ಇಲ್ಲವಾಗಿದ್ದು, ಈ ಬಾರಿಯಾದರೂ ಪ್ರವೇಶ ಪ್ರಕ್ರಿಯೆ ನಡೆಯುತ್ತಾ ಎಂಬ ಪ್ರಶ್ನೆ ಮೂಡಿದೆ.

    ಬಿಎಸ್ಸಿ ಪ್ರಥಮ ವರ್ಷದ ಕೋರ್ಸ್‌ಗೆ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಕಾಲೇಜಿಗೆ ಬಂದಾಗ ಪ್ರಯೋಗಾಲಯ ಮತ್ತು ಪಾಠ ಪ್ರವಚನಕ್ಕಾಗಿ ಪ್ರಾಧ್ಯಾಪಕರಿದ್ದಾರೆಯೇ ಎಂದು ಕೇಳುತ್ತಾರೆ. ಕನಿಷ್ಠ 15 ವಿದ್ಯಾರ್ಥಿಗಳ ಪ್ರವೇಶ ಪಡೆದಲ್ಲಿ ಬಿಎಸ್ಸಿ ಕೋರ್ಸ್ ಆರಂಭವಾಗುತ್ತದೆ. ಬಳಿಕ ಪ್ರಾಧ್ಯಾಪಕರು ಬರುತ್ತಾರೆ, ಲ್ಯಾಬ್ ಸಹ ಆರಂಭಗೊಳ್ಳುತ್ತದೆ ಎಂದು ಪ್ರಾಚಾರ್ಯರು ತಿಳಿಸುತ್ತಾರೆ.

    ಆದರೆ, ಅಗತ್ಯವಾಗಿ ಬೇಕಾದ ಸೌಲಭ್ಯ ಇಲ್ಲದ ಕೋರ್ಸ್ ನಮಗೆ ಬೇಡ ಎಂದು ವಿದ್ಯಾರ್ಥಿಗಳು ಗಂಗಾವತಿ, ಬಳ್ಳಾರಿ, ಹೊಸಪೇಟೆಯತ್ತ ಮುಖ ಮಾಡುತ್ತಾರೆ. ಹೀಗಾಗಿ ಕೆಲ ವರ್ಷಗಳಿಂದ ಬಿಎಸ್ಸಿ ಆರಂಭಕ್ಕೆ ಮುಹೂರ್ತವೇ ಕೂಡಿಬರುತ್ತಿಲ್ಲ.

    ಇದನ್ನೂ ಓದಿ: ಶಿಕ್ಷಕರಾಗ್ತೀರಾ..; ನಾಲ್ಕು ವರ್ಷ ಬಿಎಡ್ ಓದಿ..

    ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಗಲ್ನತೆಯಲ್ಲಿ ಬಿಎ, ಬಿಕಾಂ, ಬಿಎಸ್ಸಿ ಕೋರ್ಸ್ ಆರಂಭಕ್ಕೆ ಅನುಮೋದನೆ ದೊರೆತಿದೆ. ಈಗಾಗಲೇ ಬಿಎ, ಬಿಕಾಂ ಕೋರ್ಸ್ ನಡೆಯುತ್ತಿದ್ದು, ಸದ್ಯ ಬಿಎಸ್ಸಿ (ಫಿಜಿಕ್ಸ್, ಮ್ಯಾಥ್ಸ್ ಮತ್ತು ಕಂಪ್ಯೂಟರ್ ಸೈನ್ಸ್) ಪ್ರಥಮ ವರ್ಷ ಕೋರ್ಸ್ ಆರಂಭಗೊಳ್ಳಬೇಕಿದೆ. ಇದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ವರವಾಗಲಿದ್ದು, ಪರದಾಟವೂ ತಪ್ಪಲಿದೆ.

    ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಥಮ ವರ್ಷದ ಬಿಎಸ್ಸಿ ಕೋರ್ಸ್ ಆರಂಭಿಸಲಾಗುವುದು. ಇದಕ್ಕಾಗಿ ಆರು ಕೋಣೆಗಳುಳ್ಳ ವಿಜ್ಞಾನ ಬ್ಲಾಕ್ ಸಿದ್ಧವಿದೆ. ಲ್ಯಾಬ್ ಸಾಮಗ್ರಿ ಬರಬೇಕಿದೆ. ವಿದ್ಯಾರ್ಥಿಗಳು ಬಿಎಸ್ಸಿಗೆ ಪ್ರವೇಶ ಪಡೆಯುವಂತೆ ಬ್ಯಾನರ್ ಹಾಕಿಸಲಾಗಿದೆ. ಕರಪತ್ರಗಳನ್ನು ವಿತರಿಸಲಾಗಿದೆ. ಪಿಯು ಕಾಲೇಜುಗಳಲ್ಲಿ ಪ್ರಚಾರ ಕೂಡಾ ಮಾಡಲಾಗಿದೆ. ಕನಿಷ್ಠ 15ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಲ್ಲಿ ಲ್ಯಾಬ್, ಪ್ರಾಧ್ಯಾಪಕರು ಸೇರಿ ಎಲ್ಲ ಸೌಲಭ್ಯ ದೊರೆಯಲಿದೆ. ಬಿಎಸ್ಸಿ ಮೊದಲ ವರ್ಷದ ಕೋರ್ಸ್ ಆರಂಭಕ್ಕೆ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಮುಂದಾಗಬೇಕು, ಪಾಲಕರು, ನಾಗರಿಕರು ಸಹಕರಿಸಬೇಕು.
    ಡಾ.ಅನ್ನಪೂರ್ಣ ಗುಡುದೂರು
    ಪ್ರಭಾರ ಪ್ರಾಚಾರ್ಯೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ

    ಈ ವರ್ಷ ಬಿಎಸ್ಸಿ ಕೋರ್ಸ್ ಆರಂಭಗೊಳ್ಳಬೇಕು. ಸರ್ಕಾರ ಕೂಡಲೇ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು. ಪ್ರಯೋಗಾಲಯ ಒದಗಿಸಬೇಕು. ಸೌಲಭ್ಯ ಇದ್ದರೆ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಈ ವರ್ಷ 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಿಎಸ್ಸಿ ಕೋರ್ಸ್‌ಗೆ ದಾಖಲು ಮಾಡಿಸುತ್ತೇವೆ.
    ಎಚ್.ಎಂ.ಮಾರುತಿ
    ಜಿಲ್ಲಾ ಕಾರ್ಯದರ್ಶಿ, ಎಸ್‌ಎಫ್‌ಐ, ಕಂಪ್ಲಿ

    ಕೆಲ ವರ್ಷಗಳಿಂದ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ಕೋರ್ಸ್ ಆರಂಭಿಸುವ ಸುದ್ದಿ ಕೇಳಿ ಬರುತ್ತಿದೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ. ಬಿಎಸ್ಸಿ ಆರಂಭಕ್ಕೆ ತಕ್ಕ ವ್ಯವಸ್ಥೆ, ಸೌಲಭ್ಯಸರ್ಕಾರ ಒದಗಿಸಬೇಕು. ಬಿಎಸ್ಸಿ ಆರಂಭಕ್ಕೆ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಮನವೊಲಿಸುವ ಕಾರ್ಯ ಕೈಗೊಳ್ಳಬೇಕು.
    ಎಸ್.ಎಂ.ಗುರುಪ್ರಸನ್ನ
    ಅಧ್ಯಕ್ಷರು, ಜನ ಸೇವಾ ಸಮಿತಿ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts