ದಾಸ ಸಾಹಿತ್ಯಕ್ಕೆ ಅವಮಾನ ಆರೋಪ: ಮಂಗಳೂರು ವಿವಿ ಪಠ್ಯ ವಾಪಸ್‌ಗೆ ಎಬಿವಿಪಿ ಆಗ್ರಹ

ಮಂಗಳೂರು: ಈ ಹಿಂದೆ ಎರಡು ಬಾರಿ ವಿವಾದಿತ ಪಠ್ಯ ಮುದ್ರಿಸಿ ಚರ್ಚೆಗೀಡಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಹಳೇ ಚಾಳಿ ಮುಂದುವರಿಸಿದೆ. ಸಾಹಿತ್ಯ ಚರಿತ್ರೆ ಹೆಸರಿನಲ್ಲಿ ದಾಸ ಸಾಹಿತ್ಯದ ಬಗ್ಗೆ ಅಪಮಾನಕರ ವಿಷಯವನ್ನು ಬಿಎ ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಮೇಜರ್ ವಿದ್ಯಾರ್ಥಿಗಳ ಪಠ್ಯದಲ್ಲಿ ಪ್ರಕಟಿಸಿ ಸಾಹಿತ್ಯಕ್ಕೆ ದ್ರೋಹ ಬಗೆದಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.

ಹಿಂದೆ ಸೈನಿಕರನ್ನು ಅವಮಾನಿಸಿ, ಅನೈತಿಕತೆ ವೈಭವೀಕರಿಸಿ ಮಾಡಿದ ಪಠ್ಯಗಳನ್ನು ಹಿಂಪಡೆಯಲಾಗಿತ್ತು. ಈಗ ಮತ್ತೊಮ್ಮೆ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಯತ್ನ ವಿವಿ ಮಾಡಿದೆ.

ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ… ಜಾತಿ ಹಿತಾಸಕ್ತಿ ಕಾಯುವ ಹುನ್ನಾರ… ಕನಕದಾಸ ಬಲೆಯೊಳಗೆ ಬಿದ್ದ ಮಿಕ ಎಂದೆಲ್ಲ ಮಂಗಳೂರು ವಿವಿಯ ಕನ್ನಡ ಪಠ್ಯಪುಸ್ತಕ ‘ಸಾಹಿತ್ಯ ಸೊಡರು’ವಿನಲ್ಲಿನ ಕೀರ್ತನ ಸಾಹಿತ್ಯ ಚರಿತ್ರೆ ಪಠ್ಯದಲ್ಲಿ ಮುದ್ರಿಸಲಾಗಿದೆ.

ಪಠ್ಯದಲ್ಲಿ ನಿರೂಪಿಸಿದಂತೆ ಕೀರ್ತನ ಸಾಹಿತ್ಯ ಜಾತಿ ಹಿತಾಸಕ್ತಿ ಕಾಯ್ದುಕೊಳ್ಳುವ ಹುನ್ನಾರವೇ ಆಗಿದ್ದರೆ ಸಾಹಿತ್ಯ ಪಠ್ಯವಾಗಿ ಕೀರ್ತನೆಗಳನ್ನು ಯಾಕೆ ಬೋಧಿಸಬೇಕು ಎಂದು ಪ್ರಶ್ನಿಸಿರುವ ಎಬಿವಿಪಿ, ಪಠ್ಯ ಹಿಂಪಡೆಯಲು ಒತ್ತಾಯಿಸಿದೆ.

ಇಂಥ ಪಠ್ಯ ಬೋಧನೆಯಿಂದ ಒಂದು ತಲೆಮಾರು ದಾರಿ ತಪ್ಪುವ ಆತಂಕವಿದೆ. ಆದ್ದರಿಂದ ತಕ್ಷಣ ಸಾಹಿತ್ಯ ಸೊಡರು ಪಠ್ಯವನ್ನು ಹಿಂದೆ ಪಡೆದು ಬೇರೆ ಪಾಠ ಸೂಚಿಸಬೇಕು. ದುರುದ್ದೇಶದಿಂದ ವರ್ತಿಸಿದ ಸಂಪಾದಕ ಮಂಡಳಿ ಹಾಗೂ ಪ್ರಧಾನ ಸಂಪಾದಕರನ್ನು ಪಠ್ಯ ರಚನೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದೆ.