ಕೊಲ್ಲೂರು ಲಕ್ಷ್ಮೀ ಮಂಟಪಕ್ಕೆ ಮಹಿಳಾ ಅಧಿಕಾರಿ ಪ್ರವೇಶದಿಂದ ಹುಟ್ಟಿಕೊಂಡ ವಿವಾದ

ಬೈಂದೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಮಹಿಳಾ ಪ್ರವೇಶಾವಕಾಶ ಸಾಕಷ್ಟು ಪರ ವಿರೋಧದ ಬೆಳವಣಿಗೆ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸುವ ಮೂಲಕ ವಿವಾದ ಹುಟ್ಟಿಕೊಂಡಿದೆ. ಈ ಘಟನೆ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ.

ಉಮಾ ಎಂಬುವವರು ಮಂಗಳವಾರ ಲಕ್ಷ್ಮೀ ಮಂಟಪ ಪ್ರವೇಶ ಮಾಡಿದ್ದಾರೆ. ಅವರು ಹಿಂದೆ ದೇವಳದ ಆಡಳಿತಾಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಒಳ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ. ನವರಾತ್ರಿ ಸಂದರ್ಭ ಕೊಲ್ಲೂರಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿ ಮೊದಲ ದಿನ ಒಬ್ಬರಿಗೆ, ಎರಡೇ ದಿನ ಇಬ್ಬರಿಗೆ, 9ನೇ ದಿನ 9 ಮಂದಿ ಗ್ರಾಮದ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಕ್ರಮ ಇಲ್ಲಿದೆ. ಆ ಸಂದರ್ಭ ಮಾತ್ರ ಮಹಿಳೆಯರು ಲಕ್ಷ್ಮೀ ಮಂಟಪ ಪ್ರವೇಶಿಸಬಹುದು. ಆದರೆ, ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭ ಒಳ ಹೊಕ್ಕಿದ್ದು ಅಪಚಾರ ಆಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಉಮಾ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ದೇವಸ್ಥಾನದಲ್ಲಿ ಬಹಳ ಅಕ್ರಮ ನಡೆದಿತ್ತು. ಹರಕೆ ನೀಡಿದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್ಮಾಲ್ ಮಾಡಿದ್ದರು. ಇದೀಗ ಉಮಾ ಅವರಿಗೆ ಲಕ್ಷ್ಮೀ ಮಂಟಪ ಪ್ರವೇಶ ಅವಕಾಶ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿಯಾಗಿದ್ದಾಗ ಉಮಾ ಲಕ್ಷ್ಮೀ ಮಂಟಪ ಪ್ರವೇಶಿಸುತ್ತಿದ್ದರು. ಆಗ ಹುದ್ದೆಯ ಗೌರವಕ್ಕಾಗಿ ಈ ಅವಕಾಶ ಕೊಡಲಾಗಿತ್ತು. ಈಗ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕೊಲ್ಲೂರು ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ ಮಹಿಳಾ ಅಧಿಕಾರಿಯೊಬ್ಬರು ಲಕ್ಷ್ಮೀ ಮಂಟಪ ಪ್ರವೇಶಿಸಿದ್ದಾರೆ ಎಂಬ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಕುಂದಾಪುರ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಚಕರ ಕುಟುಂಬದ ಮಹಿಳೆಯರು ನವರಾತ್ರಿ ಸಂದರ್ಭ ಬಾಗಿನ ಅರ್ಪಿಸಲು ಇಲ್ಲಿಗೆ ತೆರಳುತ್ತಾರೆ. ಸಂಪ್ರದಾಯ ಪಾಲನೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಆಗಮ ಪಂಡಿತರಿಂದ ವರದಿ ಪಡೆಯಲಾಗುವುದು.
|ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಉಪಾಯುಕ್ತೆ.