ಹಿಂದಿಯಲ್ಲೂ ಜೋರಾಯ್ತು ರಾಕಿ ಭಾಯ್ ಸೌಂಡು

ಬೆಂಗಳೂರು: ಯಶ್ ಅಭಿಮಾನಿಗಳ ಬಾಯಲ್ಲಿ ‘ಸಲಾಂ ರಾಕಿ ಭಾಯ್…’ ಗೀತೆಯೇ ರಿಪೀಟ್ ಮೋಡ್​ನಲ್ಲಿ ಗುನುಗುನಿಸುತ್ತಿದೆ. ದೇಶಾದ್ಯಂತ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಕೆಜಿಎಫ್’ ಚಿತ್ರದ ಈ ಗೀತೆ ಮಂಗಳವಾರ (ಡಿ.4) ಯೂಟ್ಯೂಬ್​ನಲ್ಲಿ ರಿಲೀಸ್ ಆಗುತ್ತಿದ್ದಂತೆಯೇ ಮಿಶ್ರ ಪ್ರತಿಕ್ರಿಯೆ ಕೇಳಿಬಂತು. ಅದಕ್ಕೆ ಕಾರಣ; ಗೀತೆಯ ಸಾಹಿತ್ಯದಲ್ಲಿ ಬಳಕೆಯಾದ ಹಿಂದಿ ಪದಗಳು! ಹೌದು, ಹಾಡಿನ ಆರಂಭದಿಂದ ಕೊನೆವರೆಗೆ ಹತ್ತಾರು ಹಿಂದಿ ವಾಕ್ಯಗಳೇ ರಾರಾಜಿಸಿವೆ. ಅದನ್ನು ಕೇಳಿಸಿಕೊಂಡ ಅನೇಕರು ಗೀತಸಾಹಿತಿ ವಿ. ನಾಗೇಂದ್ರ ಪ್ರಸಾದ್ ವಿರುದ್ಧ ಗುಡುಗಿದ್ದಾರೆ. ಕನ್ನಡದ ಹಾಡಿನಲ್ಲಿ ಇಷ್ಟೆಲ್ಲ ಹಿಂದಿ ಹೇರಿಕೆ ಮಾಡುವ ಅಗತ್ಯವೇನಿತ್ತು ಎಂಬುದು ಅವರೆಲ್ಲರ ವಾದ. ಅಲ್ಲದೆ, ‘ಕೆಜಿಎಫ್’ ತಮಿಳು ಅವತರಣಿಕೆಯ ಇದೇ ಹಾಡಿನಲ್ಲಿ ಹಿಂದಿಯ ಬದಲಿಗೆ ಸಂಪೂರ್ಣ ತಮಿಳು ಬಳಕೆಯಾಗಿದೆ. ಕನ್ನಡ ಅವತರಣಿಕೆಯಲ್ಲೂ ಪೂರ್ತಿ ಕನ್ನಡವನ್ನೇ ಬಳಸಬಹುದಿತ್ತಲ್ಲವೇ ಎಂದೂ ಕೆಲವರು ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ನಾಗೇಂದ್ರ ಪ್ರಸಾದ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ‘ಇದು ಕನ್ನಡದಲ್ಲಿ ಇರುವಂಥ ಹಿಂದಿ ಹಾಡು. ಈ ಸಿನಿಮಾದ ಕಥೆಗೆ ಅನುಗುಣವಾಗಿ ಬರೆದಿರುವುದು. ರಾಜ್​ಕುಮಾರ್ ಅವರು ಹಾಡಿದ್ದ ‘ಇಫ್ ಯೂ ಕಮ್ ಟು ಡೇ..’ ಯಾವ ಭಾಷೆಯ ಗೀತೆ ಎನ್ನುತ್ತೀರಿ? ತಮಿಳುನಾಡಿನವರಿಗೆ ಅಷ್ಟೇನೂ ಹಿಂದಿ ಬರುವುದಿಲ್ಲ. ಹಾಗಾಗಿ ಸಂಪೂರ್ಣ ತಮಿಳು ಬಳಸಿದ್ದಾರೆ. ಆದರೆ ನಮ್ಮ ಜನರಿಗೆ ಹಿಂದಿ ಅರ್ಥವಾಗುತ್ತದೆ. ಹತ್ತಾರು ಬಾಲಿವುಡ್ ಸಿನಿಮಾಗಳನ್ನು ಕರ್ನಾಟಕದಲ್ಲಿ ಒಂದೊಂದು ವರ್ಷ ಪ್ರದರ್ಶನ ಕಾಣುವಂತೆ ಮಾಡಿದವರು ನಾವೇ ತಾನೇ? ಅನಾದಿಕಾಲದಿಂದಲೂ ಅನ್ಯಭಾಷೆಯ ಪದಗಳನ್ನು ಸಾಂಸ್ಕೃತಿಕವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡು ಬೆಳೆದ ಭಾಷೆ ಕನ್ನಡ. ಇದು ದೊಡ್ಡ ಆಲದ ಮರ. ನಮ್ಮ ಭಾಷೆಗೂ ಹಿಂದಿಗೂ ತಾಳೆ ಹಾಕುವುದು ಸರಿಯಲ್ಲ’ ಎಂದಿದ್ದಾರೆ ವಿ. ನಾಗೇಂದ್ರ ಪ್ರಸಾದ್. ಇಷ್ಟೆಲ್ಲ ಪರ-ವಿರೋಧಗಳ ನಡುವೆಯೂ ‘ಸಲಾಂ ರಾಕಿ ಭಾಯ್…’ ಗೀತೆಗೆ ಭಾರಿ ಮೆಚ್ಚುಗೆ ಕೇಳಿಬಂದಿದ್ದು, ಒಂದೇ ದಿನಕ್ಕೆ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ಯೂಟ್ಯೂಬ್ ಟ್ರೆಂಡಿಂಗ್​ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ.

ಇದು ಒಂದು ಪ್ರಯೋಗ. ಭಾಷೆಯ ಮೇಲಾದ ಅತ್ಯಾಚಾರ ಎಂದು ಭಾವಿಸಬಾರದು. ಈವರೆಗೆ 3 ಸಾವಿರ ಹಾಡು ಬರೆದಿದ್ದೇನೆ. ಹೇಗೆ ಬರೆಯಬೇಕೆಂಬ ತಿಳಿವಳಿಕೆ ಇದೆ. ಎಲ್ಲರಿಗೂ ಅಭಿಪ್ರಾಯ ತಿಳಿಸುವ ಹಕ್ಕಿದೆ. ಆದರೆ ಏನೋ ಅಪರಾಧ ಮಾಡಿದ್ದೇವೆ ಎಂಬಂತೆ ಮಾತನಾಡುತ್ತಿರು ವುದು ಮನಸ್ಸಿಗೆ ನೋವುಂಟು ಮಾಡಿದೆ.

| ವಿ. ನಾಗೇಂದ್ರ ಪ್ರಸಾದ್ ಗೀತಸಾಹಿತಿ

ಅಬ್ಬರಿಸುತ್ತಿದೆ ಎರಡನೇ ಟ್ರೇಲರ್!

ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಇನ್ನಷ್ಟು ಕುತೂಹಲ ಹೆಚ್ಚಿಸುವ ಕಾಯಕದಲ್ಲಿ ‘ಕೆಜಿಎಫ್’ ಬಳಗ ಮಗ್ನವಾಗಿದೆ. ಸಿನಿಮಾದ ಸೆಟ್ ರೀತಿಯೇ ವೇದಿಕೆ ನಿರ್ವಿುಸಿ, ಬುಧವಾರ ಮುಂಬೈನಲ್ಲಿ ಸುದ್ದಿಗೋಷ್ಠಿ ಮಾಡಿದ ಚಿತ್ರತಂಡ ಹಿಂದಿ ಅವತರಣಿಕೆಯ ಎರಡನೇ ಟ್ರೇಲರ್ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ರೇಲರ್​ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.