More

    ಪೌರತ್ವದ ಹೆಸರಿನಲ್ಲಿ ವಿವಾದ ಸೃಷ್ಟಿ

    ಮಂಡ್ಯ: ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಹಾಗೂ ಮತಾಂಧ ಸಂಘಟನೆಗಳಿಗೆ ಕೇಂದ್ರ ಸರ್ಕಾರವನ್ನು ಟೀಕಿಸುವುದಕ್ಕೆ ಬೇರೆ ಯಾವ ವಿಷಯಗಳೂ ಇಲ್ಲ. ಅದಕ್ಕಾಗಿ ಪೌರತ್ವ ಕಾನೂನನ್ನು ಮುಂದಿಟ್ಟುಕೊಂಡು ವಿವಾದದ ಬೆಂಕಿ ಹೆಚ್ಚುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದರು.

    ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ‘ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆ’ ಉದ್ಘಾಟಿಸಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾನೂನು ಮುಸ್ಲಿಂ ವಿರುದ್ಧವಾಗಿಯೂ ಇಲ್ಲ. ಅಂತೆಯೇ, ಬಿಜೆಪಿ ಮುಸ್ಲಿಂ ವಿರೋಧಿಯೂ ಅಲ್ಲ ಎಂದರು.

    ಜಾತಿ-ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ್ದು ಕಾಂಗ್ರೆಸ್. ಭಾರತದಿಂದ ಪಾಕಿಸ್ತಾನವನ್ನು ವಿಭಜಿಸುವಾಗ ಅನುಸರಿಸಿದ ನೀತಿ ಧರ್ಮಾಧಾರಿತವಾಗಿದ್ದು ಎನ್ನುವುದನ್ನು ದೇಶದ ಜನರು ಮರೆತಿಲ್ಲ. ಆದರೆ, ಬಿಜೆಪಿಯವರು ಅಂತಹ ನೀಚ ಕೆಲಸ ಮಾಡುವುದಿಲ್ಲ. ದೇಶದ ಮುಸ್ಲಿಂರ ಗೌರವ-ಮರ್ಯಾದೆಗೆ ಧಕ್ಕೆಯಾಗದ ರೀತಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರಲಾಗಿದೆ. ಇದನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರು ಸಹಿಸದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂಷಿಸಿದರು.

    ಮುಸ್ಲಿಂರಿಗೆ ಭಾರತದಲ್ಲಿ ಸಿಕ್ಕಷ್ಟು ಗೌರವ-ಮರ್ಯಾದೆಗಳು ಇಸ್ಲಾಮಿಕ್ ರಾಷ್ಟ್ರಗಳಲ್ಲೇ ದೊರಕಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ 685 ಮುಸ್ಲಿಂರಿಗೆ ಪೌರತ್ವವನ್ನು ನೀಡಿದ್ದೇವೆ. ಪೌರತ್ವ ನೋಂದಣಿ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ. 11 ವರ್ಷವಿದ್ದ ದಾಖಲೆಗಳ ಅವಧಿಯನ್ನು ಐದು ವರ್ಷಕ್ಕೆ ಇಳಿಸಿದ್ದೇವೆ. ಇವೆಲ್ಲವೂ ನಾವು ಮುಸ್ಲಿಂ ವಿರೋಧಿಯಲ್ಲ ಎನ್ನುವುದನ್ನು ಪ್ರತಿಬಿಂಬಿಸುತ್ತವೆ ಎಂದರು.

    ಪೌರತ್ವ ತಿದ್ದುಪಡಿ ಒಂದು ಮಾನವೀಯ ಹಾಗೂ ಸುಧಾರಣೆಗೆ ಅಗತ್ಯವಿರುವ ಕಾನೂನಾಗಿದೆ. ಇದರಿಂದ ಸಂವಿಧಾನದ ಯಾವುದೇ ಕಲಂಗೂ ಬಾಧಕವಿಲ್ಲ. ಭಾರತದಲ್ಲಿರುವ ಯಾವೊಬ್ಬ ನಾಯಕರಿಗೂ ಇದರಿಂದ ತೊಂದರೆಯಾಗುವುದಿಲ್ಲ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ತೊಂದರೆಗೊಳಗಾಗಿ ಬಂದ ನಮ್ಮನವರನ್ನು ಗುರುತಿಸಿ ಪೌರತ್ವ ಕೊಡುವುದು ಇದರ ಮೂಲ ಉದ್ದೇಶ ಎಂದು ಹೇಳಿದರು.

    ಸ್ವಾತಂತ್ರೃ ಬಂದ ದಿನದಿಂದ ಇವರೆಗೂ ಮುಸ್ಲಿಂರನ್ನು ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್‌ಗಾಗಿ ಬಳಸಿಕೊಂಡಿದೆ. ಈಗಲೂ ಅವರನ್ನು ಅದಕ್ಕೇ ಸೀಮಿತಗೊಳಿಸಿಕೊಂಡಿದೆ. ಆದರೆ, ಬಿಜೆಪಿ ತಲಾಖ್ ರದ್ದುಪಡಿಸಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ದೊರಕಿಸಿಕೊಟ್ಟಿದೆ. ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ ಎಲ್ಲರಿಗೂ ಸಮಾನವಾಗಿ ಬದುಕುವ ಅವಕಾಶವನ್ನು ಕಲ್ಪಿಸಿರುವುದಾಗಿ ತಿಳಿಸಿದರು.
    ಎನ್‌ಆರ್‌ಸಿ ಹಾಗೂ ಸಿಎಎಗೆ ಯಾವುದೇ ಸಂಬಂಧವಿಲ್ಲ. ಸುಮ್ಮನೆ ಗೊಂದಲಕ್ಕೆ ಒಳಗಾಗಬೇಡಿ. ಎನ್‌ಆರ್‌ಸಿಯಲ್ಲಿ ಯಾವುದೇ ವ್ಯಕ್ತಿ ಬಳಿ ದಾಖಲೆಗಳು ಇಲ್ಲದಿದ್ದರೂ ನೆರೆಯವರು ಸಾಕ್ಷಿ ನೀಡಿದರೂ ಸಾಕು. ಅವರಿಗೆ ಪೌರತ್ವ ಸಿಗುವಂತೆ ಮಾಡಲಾಗಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

    ಶಾಸಕ ಕೆ.ಸಿ.ನಾರಾಯಣಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಹೊನ್ನಪ್ಪ, ಜಿ.ಪಂ ಸದಸ್ಯ ಚಂದಗಾಲು ಶಿವಣ್ಣ, ಬಿಜೆಪಿ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಸಿದ್ದರಾಮಯ್ಯ, ಮಲ್ಲಿಕಾರ್ಜುನ್, ಎಸ್.ಪಿ.ಸ್ವಾಮಿ, ಅರುಣ್‌ಕುಮಾರ್, ಸುಜಾತಾ ಸಿದ್ದಯ್ಯ, ಎಚ್.ಆರ್.ಅರವಿಂದ್, ವಿವೇಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts