ಕರಾಚಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಐಸಿಸಿಯಿಂದ ಐದು ವರ್ಷದ ನಿಷೇಧಕ್ಕೆ ಒಳಗಾಗಿದ್ದ ಪಾಕಿಸ್ತಾನದ ವೇಗಿ ಮೊಹಮದ್ ಆಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ಎರಡನೇ ಬಾರಿಗೆ ನಿವೃತ್ತಿ ಹೇಳಿದ್ದಾರೆ. ಹಾಲಿ ವರ್ಷ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ಮಾರ್ಚ್‌ನಲ್ಲಿ ನಿವೃತ್ತಿಯನ್ನು ಹಿಂಪಡೆದಿದ್ದರು. 2010 ಹಾಗೂ 2015ರಲ್ಲಿ ಫಿಕ್ಸಿಂಗ್ ಪ್ರಕರಣದಲ್ಲಿ ಜೈಲು ವಾಸವನ್ನೂ ಅನುಭವಿಸಿರುವ ಆಮಿರ್, 2017ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಮೂಲಕ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬಳಿಕ ರಾಷ್ಟ್ರಿಯ ಕ್ರಿಕೆಟ್ ಮಂಡಳಿಯ ಮಾನಸಿಕ ಹಿಂಸೆಯಿಂದಾಗಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ 2020ರಲ್ಲಿ ತಿಳಿಸಿದ್ದರು. 2009ರ ಟಿ20 ವಿಶ್ವಕಪ್ ಚಾಂಪಿಯನ್ ಪಾಕ್ ತಂಡದ ಸದಸ್ಯ ಆಗಿರುವ ಆಮಿರ್, ಪಾಕ್ ಪರ 36 ಟೆಸ್ಟ್, 61 ಏಕದಿನ ಹಾಗೂ 62 ಟಿ20 ಪಂದ್ಯಗಳನ್ನಾಡಿದ್ದು, 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಆಲ್ರೌಂಡರ್ ಇಮಾದ್ ವಸೀಂ ಸಹ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿ ನಿವೃತ್ತಿ ತಿಳಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ಇವರಿಬ್ಬರೂ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದಿದ್ದರು.