ಕೃಷಿ ಬಳಕೆ ನೀರಿಗೆ ನಿಯಂತ್ರಣ

< ಕುಡಿಯವ ನೀರು ಅಭಾವ ಹಿನ್ನೆಲೆ * ರೈತರಿಗೆ ಎದುರಾಗಿದೆ ಸಂಕಷ್ಟ >

ಪುರುಷೋತ್ತಮ ಪೆರ್ಲ ಕಾಸರಗೋಡು

ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೃಷಿಕರ ಮೇಲೆ ಪ್ರಹಾರಕ್ಕೆ ಮುಂದಾಗಿದೆ. ತಮ್ಮಷ್ಟಕ್ಕೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೃಷಿಕರಿಗೆ ಸರ್ಕಾರ ನೀರಿನ ಬಿಸಿ ಮುಟ್ಟಿಸಿದೆ.

ಹೊಳೆ, ಬಾವಿ, ಕೆರೆ ಸಹಿತ ವಿವಿಧ ಜಲಮೂಲಗಳಿಂದ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಿಸಿ ಕೃಷಿ ಕಾರ್ಯಗಳಿಗೆ ಬಳಸುತ್ತಿರುವುದರ ವಿರುದ್ಧ ನಿಯಂತ್ರಣ ಹೇರಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಕೃಷಿಕರನ್ನು ಆಕ್ರೋಶಕ್ಕೆ ತಳ್ಳುವಂತೆ ಮಾಡಿದೆ. ಹಗಲು ರಾತ್ರಿ ಬೆವರು ಸುರಿಸಿ ಬೆಳೆಸಿರುವ ಕೃಷಿಗೆ ನೀರು ಹಾಯಿಸಿ ಸಂರಕ್ಷಿಸಲು ಪರದಾಟ ನಡೆಸುತ್ತಿರುವ ಕೃಷಿಕರಿಗೆ ಸರ್ಕಾರದ ಆದೇಶ ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿ ನಿರ್ಮಾಣವಾಗಿದೆ.

ಏಕಾಏಕಿ ತೀರ್ಮಾನ: ಕೃಷಿ ಕಾರ್ಯಗಳಿಗಾಗಿ ಹೊಳೆಯಿಂದ ನೀರು ಬಳಸುತ್ತಿರುವ ಕೃಷಿಕರ ಮೇಲೆ ಜಿಲ್ಲಾಡಳಿತ ಏಕಾಏಕಿ ನಿಯಂತ್ರಣ ಹೇರಿದೆ. ಶುದ್ಧ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಲಭ್ಯವಾಗುತ್ತಿಲ್ಲ ಎಂಬ ಕಾರಣ ಮುಂದೊಡ್ಡಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಅಡಕೆ, ತೆಂಗು, ಬಾಳೆ ಕೃಷಿಗೆ ಬೆಳಗ್ಗೆ 6ರಿಂದ 9ರ ಕಾಲಾವಧಿಯಲ್ಲಿ ಮಾತ್ರ ನೀರು ಹಾಯಿಸಬೇಕು. ಭತ್ತ, ತರಕಾರಿ ಕೃಷಿಗೆ ನಿಯಂತ್ರಣ ಬಾಧಕವಾಗುವುದಿಲ್ಲ. ಅನುಮತಿ ಲಭಿಸಿರುವುದಕ್ಕಿಂತ ಹೆಚ್ಚಿನ ಅಶ್ವಶಕ್ತಿಯ ಮೋಟಾರು ಬಳಸಿ ಪಂಪಿಂಗ್ ನಡೆಸದಂತೆಯೂ ಸೂಚಿಸಲಾಗಿದೆ. ಆದರೆ ಜಿಲ್ಲಾಡಳಿತ ನಿಗದಿಪಡಿಸಿದ ಕಾಲಾವಧಿಯಲ್ಲಿ ವೋಲ್ಟೇಜ್ ಸಮಸ್ಯೆ ಕಾಡುತ್ತಿರುವುದರಿಂದ ಈ ಸಮಯದಲ್ಲಿ ನೀರು ಹಾಯಿಸಲು ಸಾಧ್ಯವಾಗದ ಸ್ಥಿತಿಯಿದೆ.

ಮರಳು ಮಾಫಿಯಾ ವಿರುದ್ಧ ಧ್ವನಿಯಿಲ್ಲ: ಒಂದೆಡೆ ಉಚಿತ ವಿದ್ಯುತ್ ಹೆಸರಲ್ಲಿ ವ್ಯಾಪಕ ನೀರು ಪೋಲು ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಬೃಹತ್ ಉದ್ಯಮಿಗಳು, ನಿರ್ಮಾಣ ಗುತ್ತಿಗೆದಾರರು ಭಾರಿ ಪ್ರಮಾಣದಲ್ಲಿ ಹೊಳೆ ಸಹಿತ ಜಲಮೂಲಗಳಿಂದ ನೀರು ಸಂಗ್ರಹಿಸುತ್ತಿದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ. ಅನಧಿಕೃತ ಮರಳು ಸಂಗ್ರಹದಿಂದ ಹೊಳೆ ಬರಡಾಗುತ್ತಿದ್ದರೂ, ಕಂದಾಯ ಇಲಾಖೆ ಮರಳು ಮಾಫಿಯಾಗಳ ವಿರುದ್ಧ ಕ್ರಮ ಜರಗಿಸುತ್ತಿಲ್ಲ. ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕಂದಾಯ ಇಲಾಖೆಯ ಕೆಲವು ಸಿಬ್ಬಂದಿ, ಇವರೊಂದಿಗೆ ಕೈಜೋಡಿಸಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ.

ಸೋರಿಕೆ ತಡೆಗಟ್ಟಲಿ: ಕೃಷಿ ಕಾರ್ಯಕ್ಕೆ ನೀರು ಬಳಕೆ ವಿರುದ್ಧ ಕೃಷಿಕರ ಮೇಲೆ ನಿಯಂತ್ರಣ ಹೇರುವ ಮೊದಲು ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವ ನೀರಿನ ಪೈಪ್‌ಗಳನ್ನು ದುರಸ್ತಿಪಡಿಸಲಿ. ಬಾವಿಕೆರೆಯಿಂದ ಕಾಸರಗೋಡಿಗೆ ಶುದ್ಧ ಜಲ ಪೂರೈಸಲು ಅಳವಡಿಸಿದ ನೀರಿನ ಪೈಪ್ ಸೋರಿಕೆಯಾಗಿ ದಿನಕ್ಕೆ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ ಎಂದು ಕೃಷಿಕರು ಪ್ರಶ್ನಿಸುತ್ತಿದ್ದಾರೆ. ವೋಲ್ಟೇಜ್ ಸಮಸ್ಯೆ ಮಧ್ಯೆ ಜಿಲ್ಲಾಡಳಿತ ನೀರಿನ ಬಳಕೆ ಮೇಲೆ ವಿಧಿಸಿರುವ ನಿಯಂತ್ರಣ ಕೃಷಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಜಲನಿಧಿ ಸಹಿತ ವಿವಿಧ ಯೋಜನೆ ರೂಪಿಸಿ ಪ್ರಸಕ್ತ ನೀರಿಲ್ಲದೆ ಯೋಜನೆ ಬುಡಮೇಲಾಗುವ ಸ್ಥಿತಿ ಇದೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಕೃಷಿಕರ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂಬುದು ಕೃಷಿಕರ ಆರೋಪ.

ದಿನಗಳೆದಂತೆ ಉಷ್ಣಾಂಶ ಹೆಚ್ಚುತ್ತಿದ್ದು, ನಿರಂತರ ನೀರು ಸಿಂಪಡಿಸಿ ಕೃಷಿ ಸಂರಕ್ಷಿಸುವುದೇ ಸವಾಲೆನಿಸಿದೆ. ಈ ಮಧ್ಯೆ ಜಿಲ್ಲಾಡಳಿತ ಏಕಾಏಕಿ ಕೈಗೊಂಡಿರುವ ತೀರ್ಮಾನ ಖಂಡನೀಯ. ಬದಲಿ ವ್ಯವಸ್ಥೆ ಮಾಡದೆ ಕೃಷಿ ಚಟುವಟಿಕೆಗಳಿಗೆ ಹೊಳೆಯಿಂದ ನೀರು ಬಳಸುವುದಕ್ಕೆ ನಿಯಂತ್ರಣ ಹೇರಿದಲ್ಲಿ, ಕೃಷಿಕರ ಪಾಲಿಗೆ ಮಾರಕವಾಗಲಿದೆ. ಬಜೆಟ್‌ನಲ್ಲಿ ಕೃಷಿಕರನ್ನು ನಿರ್ಲಕ್ಷಿಸಿರುವ ಸರ್ಕಾರ, ಪ್ರಸಕ್ತನೀರಿನ ಮೇಲೆ ನಿಯಂತ್ರಣ ಹೇರಿರುವುದು ಸರಿಯಲ್ಲ.
ಸೂರ್ಯನಾರಾಯಣ ಪಾರ್ತಕೊಚ್ಚಿ
ಪ್ರಗತಿಪರ ಕೃಷಿಕ