ಯಲ್ಲಾಪುರ: ಕಣ್ಣಿನ ಸಮಸ್ಯೆ ಮಕ್ಕಳಲ್ಲಿಯೂ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳು ಮೊಬೈಲ್ ಬಳಸುವುದನ್ನು ನಿಯಂತ್ರಿಸಿದರೆ ಈ ಸಮಸ್ಯೆ ದೂರವಾಗಬಹುದು. ಈ ನಿಟ್ಟಿನಲ್ಲಿ ಹಿರಿಯರು ಪ್ರಯತ್ನಿಸಬೇಕು ಎಂದು ನೇತ್ರ ತಜ್ಞೆ ಡಾ. ಸೌಮ್ಯಾ ಕೆ.ವಿ ಹೇಳಿದರು.
ಅವರು ಪಟ್ಟಣದ ಅಡಕೆ ಭವನದಲ್ಲಿ ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗದ ಆಶ್ರಯದಲ್ಲಿ ಕುಮಟಾದ ಲಯನ್ಸ್ ರೇವಣಕರ್ ಚಾರಿಟಬಲ್ ಕಣ್ಣಿನ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಕಣ್ಣಿನ ಪೊರೆ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ಮರಣದ ನಂತರವೂ ಜೀವಂತವಾಗಿರಲು ನೇತ್ರದಾನ ಮಾಡುವಂತೆ ಸಲಹೆ ನೀಡಿದರು.
ರೇವಣಕರ್ ಆಸ್ಪತ್ರೆಯ ಡಾ.ರಾಜಶೇಖರ, ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ಶೇಷಗಿರಿ ಪ್ರಭು, ಖಜಾಂಚಿ ಮಹೇಶ ಗೌಳಿ ಇದ್ದರು. ಎಸ್.ಎಲ್. ಭಟ್ಟ ನಿರ್ವಹಿಸಿದರು.
ಕುಮಟಾದ ಲಯನ್ಸ್ ರೇವಣಕರ್ ಚಾರಿಟಬಲ್ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದವರಿಗೆ ತಪಾಸಣೆ ನಡೆಸಿದರು.