ನಕಲಿ ನೋಟು ಚಲಾವಣೆ ನಿಯಂತ್ರಿಸಿ 

ರಾಣೆಬೆನ್ನೂರ: ವಾಣಿಜ್ಯ ನಗರಿಯಲ್ಲಿ 500 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ಆರಂಭವಾಗಿದೆ.

ನಗರಕ್ಕೆ ವಿವಿಧ ಪ್ರದೇಶದಿಂದ ಸಾವಿರಾರು ಮಂದಿ ನಿತ್ಯ ವ್ಯಾಪಾರ-ವಹಿವಾಟಿಗಾಗಿ ಆಗಮಿಸುತ್ತಾರೆ. ಇಲ್ಲಿನ ಜನನಿಬಿಡ ಪ್ರದೇಶಗಳಾದ ಕುರುಬಗೇರಿ, ಪಿಬಿ ರಸ್ತೆ, ಎಂಜಿ ರಸ್ತೆ, ಮಾರುಕಟ್ಟೆ, ಮತ್ತಿತರ ಕಡೆಗಳಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಜತೆಗೆ ಸಿನಿಮಾ ಮಂದಿರ, ಪೆಟ್ರೋಲ್ ಬಂಕ್, ಹೋಟೆಲ್, ಬೀಜ-ಗೊಬ್ಬರ ಮಾರಾಟ ಮಳಿಗೆಗಳಲ್ಲಿ ದೊಡ್ಡ ಮೊತ್ತದ ನೋಟುಗಳು ಚಲಾವಣೆ ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ 500 ರೂ.ಗಳ ಬಂಡಲ್​ನಲ್ಲಿ ಮಧ್ಯೆ ಒಂದೆರಡು ನಕಲಿ ನೋಟುಗಳು ಸೇರಿದರೆ ತಿಳಿಯವುದೇ ಇಲ್ಲ.

ಮಂಗಳವಾರ ಪಿಬಿ ರಸ್ತೆಯಲ್ಲಿನ ಬ್ಯಾಂಕ್​ವೊಂದಕ್ಕೆ ವರ್ತಕರೊಬ್ಬರು ಹಣ ಜಮಾ ಮಾಡಲು ತೆರಳಿದ್ದರು. ಈ ವೇಳೆ ಅವರ ಹಣದಲ್ಲಿ 500 ರೂ. ಮುಖಬೆಲೆಯ ನಕಲಿ ನೋಟು ಸೇರಿದ್ದು, ಬ್ಯಾಂಕ್​ನವರಿಗೆ ತಿಳಿದು ಬಂದಿದೆ. ಎಷ್ಟೇ ಮುಂಜಾಗರೂಕತೆ ವಹಿಸಿದರೂ ನಕಲಿ ನೋಟುಗಳ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳು ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ವಯೋವೃದ್ಧರಿಗಂತೂ ಅಸಲಿ ಮತ್ತು ನಕಲಿಗಳ ಬಗ್ಗೆ ತಿಳಿಯದಂತಾಗಿದೆ ಎನ್ನುತ್ತಾರೆ ನಗರದ ಹೋಟೆಲ್ ಮಾಲೀಕರೊಬ್ಬರು.