ಮುಂದುವರಿದ ಬಿರುಗಾಳಿ ಮಳೆ ಆರ್ಭಟ,

ನಾಗಮಂಗಲ: ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ತೆಂಗಿನ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಮನೆಯ ಛಾವಣಿಗಳು ಹಾರಿಹೋಗಿವೆ. ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

15 ದಿನಗಳಲ್ಲಿ ಮೂರ್ನಾಲ್ಕು ಬಾರಿ ಸುರಿದ ಬಿರುಗಾಳಿ ಮಳೆಗೆ ಹಲವು ಗ್ರಾಮಗಳಲ್ಲಿ ಇನ್ನೂರಕ್ಕೂ ಹೆಚ್ಚು ತೆಂಗಿನ ಮರಗಳು ಬಿದ್ದುಹೋಗಿವೆ. ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಮನೆಗಳು, ಈರುಳ್ಳಿ ಸಂಸ್ಕರಣಾ ಘಟಕಗಳ ಛಾವಣಿಗಳು ಗಾಳಿಗೆ ತೂರಿಹೋಗಿವೆ.

ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ದೇವಲಾಪುರ ಹೋಬಳಿ ಕರಡಹಳ್ಳಿ ಗ್ರಾಮದ ರಾಮಯ್ಯ ಎಂಬುವರ ನಿರ್ಮಾಣ ಹಂತದಲ್ಲಿದ್ದ ಮನೆ ಛಾವಣಿ ಕಬ್ಬಿಣದ ಪೈಪ್ ಸಮೇತ ಸಿಮೆಂಟ್ ಶೀಟ್‌ಗಳು ತೂರಿಹೋಗಿ ಪಕ್ಕದ ಜಮೀನಿನಲ್ಲಿ ಜಖಂ ಆಗಿ ಬಿದ್ದಿವೆ. ಕೆ.ಎಂ.ರಾಮು ಎಂಬುವರ ಒಂದು ಎಕರೆಗೂ ಹೆಚ್ಚು ಜಮೀನಿನಲ್ಲಿ ಫರಂಗಿ ಬೆಳೆ ಸಂಪೂರ್ಣ ಹಾನಿಯಾಗಿದೆ.

ಹರಳಕೆರೆ ಗ್ರಾಮದ ಮುದ್ದಯ್ಯ ಎಂಬುವರ ಮನೆ ಛಾವಣಿ, ಶಿವಲಿಂಗೇಗೌಡರ ದನದ ಕೊಟ್ಟಿಗೆ, ಮಲ್ಲೇಶ್, ಮುದ್ದಯ್ಯ, ಮರಿಯಪ್ಪ ಹಾಗೂ ಪ್ರದೀಪ್ ಎಂಬುವರಿಗೆ ಸೇರಿದ ಈರುಳ್ಳಿ ಸಂಸ್ಕರಣಾ ಘಟಕಗಳು ಜಖಂಗೊಂಡಿದ್ದು, ಲಕ್ಷಾಂತರ ಮೌಲ್ಯದ ಈರುಳ್ಳಿ ನಾಶವಾಗಿದೆ.

ಲಕ್ಷಾಂತರ ಮೌಲ್ಯದ ಬೆಳೆ ನಾಶ
ತಾಲೂಕಿನ ಹೊಣಕೆರೆ ಹೋಬಳಿಯಲ್ಲಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಯಿಂದಾಗಿ ಸಾಮಕಹಳ್ಳಿ ಗ್ರಾಮದ ರಾಘವೇಂದ್ರ ಎಂಬುವರ 2 ಎಕರೆ ಪ್ರದೇಶದಲ್ಲಿದ್ದ ದಪ್ಪ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಹೂಕೋಸು, ಜಯರಾಮು ಎಂಬುವರ 1 ಎಕರೆಯಲ್ಲಿ ಕಟಾವಿಗೆ ಬಂದಿದ್ದ ಟಮೋಟೊ ಬೆಳೆ ನಾಶವಾಗಿದೆ.

ಇಜ್ಜಲಘಟ್ಟ ಗ್ರಾಮದ ಸುಪ್ರಿಯಾ ಎಂಬುವರಿಗೆ ಸೇರಿದ ಕಟಾವಿಗೆ ಬಂದಿದ್ದ ಫರಂಗಿ, ಬಾಳೆ ತೋಟ, ಬಚ್ಚಿಕೊಪ್ಪಲು ಗ್ರಾಮದ ಕೃಷ್ಣ ಎಂಬುವರ 3 ಎಕರೆಯಲ್ಲಿದ್ದ ಫರಂಗಿ ಬೆಳೆ, ಬ್ರಹ್ಮದೇವರಹಳ್ಳಿ ಗ್ರಾಮದ ಪುನೀತ್ ಎಂಬುವರ ಎಲೆಕೋಸು ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.

ಧರಗುರುಳಿದ ಮರ, ವಿದ್ಯುತ್ ಕಂಬಗಳು
ಭಾರಿ ಬಿರುಗಾಳಿಯಿಂದಾಗಿ ಮಂಡ್ಯ, ಮೈಸೂರು-ತುಮಕೂರು ರಸ್ತೆ, ಬಿಂಡಿಗನವಿಲೆ ರಸ್ತೆ ಹಾಗೂ ದೇವಲಾಪುರ ರಸ್ತೆ ಬದಿಯಲ್ಲಿದ್ದ ನೂರಾರು ಬೃಹತ್ ಮರಗಳು ಧರೆಗುರುಳಿವೆ. ಪರಿಣಾಮ ಶನಿವಾರ ಬೆಳಗ್ಗೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮರಗಳನ್ನು ತೆರವುಗೊಳಿಸಿದರು.

ಅಂತೆಯೇ, 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಹರಳಕೆರೆ ಗ್ರಾಮದಲ್ಲಿ ಟ್ರಾನ್ಸ್‌ಫಾರ‌್ಮರ್ ಸಹಿತ 8 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರೆ, ಬೆಳ್ಳೂರಿನಲ್ಲಿ 2 ಟ್ರಾನ್ಸ್‌ಫಾರ‌್ಮರ್ ಸಹಿತ 10 ಕಂಬ, ಬಿಂಡಿಗನವಿಲೆಯಲ್ಲಿ 1 ಟ್ರಾನ್ಸ್‌ಫಾರ‌್ಮರ್ ಸಹಿತ 4 ಕಂಬಗಳು ಮುರಿದು ಬಿದ್ದಿದ್ದು, ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಯಿತು.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆಗೂಡಿ ಪರಿಶೀಲನೆ ನಡೆಸಿದ್ದು, ಲಕ್ಷಾಂತರ ರೂ. ಮೌಲ್ಯದ ತೆಂಗು, ಬಾಳೆ, ಫರಂಗಿ ಸೇರಿ ತರಕಾರಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ರೈತರಿಗೆ ಸೂಕ್ತ ಪರಿಹಾರ ಕೊಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ.
ಎಂ.ವಿ.ರೂಪಾ ತಹಶೀಲ್ದಾರ್ ನಾಗಮಂಗಲ

Leave a Reply

Your email address will not be published. Required fields are marked *