ನಿರಂತರ ಉತ್ತಮ ಮಳೆ

 ಮಂಗಳೂರು/ಉಡುಪಿ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೋಮವಾರ ನಿರಂತರ ಮಳೆಯಾಗಿದೆ. ಹವಾಮಾನ ಇಲಾಖೆಯ ರೆಡ್ ಅಲರ್ಟ್ ಸೂಚನೆಯಿದ್ದರೂ, ಕಳೆದೆರಡು ದಿನಗಳಿಂದ ಸಾಮಾನ್ಯ ಮಳೆಯಾಗಿತ್ತು. ಸೋಮವಾರ ಮುಂಜಾನೆಯಿಂದ ದಿನವಿಡೀ ಉತ್ತಮ ಮಳೆಯಾಗಿದೆ.

ದ.ಕ. ಜಿಲ್ಲೆಯ ಸುಳ್ಯದಲ್ಲಿ ಬೆಳಗ್ಗಿನಿಂದಲೇ ಭಾರಿ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ನಿರಂತರ ಮಳೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ಜಲ ಮಟ್ಟ ಹೆಚ್ಚಾಗಿದೆ. ಪುತ್ತೂರಿನಲ್ಲಿಯೂ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಿದ್ದು, ಬಿಟ್ಟು ಬಿಟ್ಟು ಉತ್ತಮವಾಗಿ ಸುರಿದಿದೆ. ಇಂದು (ಮಂಗಳವಾರ) ರೆಡ್ ಅಲರ್ಟ್ ಮುಂದುವರಿಯಲಿದ್ದು, ಜು.27ರ ವರೆಗೆ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲಾಡಳಿತ ವತಿಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರವಾಸಿಗರು ಹಾಗೂ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕುಂಜತ್ತಬೈಲ್‌ನಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಈ ವೇಳೆ ಮನೆ ಮಂದಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಅಂಬ್ಲಮೊಗರಿನಲ್ಲಿ ಗುಡ್ಡ ಜರಿದು ಅಬ್ಬಾಸ್ ಮತ್ತು ರಜಾಕ್ ಎಂಬವರಿಗೆ ಸೇರಿದ ಮನೆಗಳು ಅಪಾಯಕ್ಕೆ ಸಿಲುಕಿವೆ. ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಂಗಳೂರಿನ ಫಳ್ನೀರ್‌ನಲ್ಲಿ ರಾಜಕಾಲುವೆ ಉಕ್ಕಿ ಹರಿದು ತಗ್ಗು ಪ್ರದೇಶದ ಹಲವು ಮನೆಗಳು ಜಲಾವೃಗೊಂಡವು. ಸರ್ಕೀಟ್ ಹೌಸ್ ಬಳಿಯ ಬಟ್ಟಗುಡ್ಡೆ ಪ್ರದೇಶದಲ್ಲಿ ಗುಡ್ಡದ ಪಾರ್ಶ್ವವೊಂದು ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಪಾಲಿಕೆ ಗ್ಯಾಂಗ್‌ಮನ್‌ಗಳು ಅದನ್ನು ತೆರವುಗೊಳಿಸಿದರು.
ಸೋಮವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 66.8 ಮಿ.ಮೀ.ಮಳೆಯಾಗಿದೆ. ಬಂಟ್ವಾಳ 66.5, ಬೆಳ್ತಂಗಡಿ 65.2, ಮಂಗಳೂರು 76.1, ಪುತ್ತೂರು 75, ಸುಳ್ಯದಲ್ಲಿ 51 ಮಿ.ಮೀ. ಮಳೆ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ. ಭಾನುವಾರ ತಡರಾತ್ರಿ ಸೋಮವಾರ ಬೆಳಗ್ಗೆವರೆಗೂ ಬಿಟ್ಟುಬಿಟ್ಟು ಧಾರಾಕಾರ ಮಳೆಯಾಗಿದೆ. ಸೋಮವಾರ ಇಡೀ ದಿನ ಸಣ್ಣ ಪ್ರಮಾಣದಲ್ಲಿ ನಿರಂತರ ಮಳೆಯಾಗಿದೆ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆವರೆಗೆ ಉಡುಪಿಯಲ್ಲಿ 31.9, ಕುಂದಾಪುರ 41.1, ಕಾರ್ಕಳ 54.9 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ 42.90 ಮಿ.ಮೀ.ಸರಾಸರಿ ಮಳೆ ದಾಖಲಾಗಿದೆ.

 ರಸ್ತೆಗೆ ಬಿದ್ದ ಮರ: ಮಂಗಳೂರು ನಗರದ ಕಂಕನಾಡಿ ಬಳಿ ಸಾಯಂಕಾಲ ಬೃಹತ್ ಆಲದ ಮರವೊಂದು ಬುಡ ಸಹಿತ ಉರುಳಿ ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ, ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು, ಮೆಸ್ಕಾಂ ಸಿಬ್ಬಂದಿ ರಾತ್ರಿಯ ವರೆಗೂ ತೆರವು ಕಾರ್ಯಾಚರಣೆ ನಡೆಸಿದರು. ಮರದ ಅಡಿಯಲ್ಲಿ ಪಾರ್ಕ್ ಮಾಡಲಾಗಿದ್ದ ಆಟೋಗೆ ಯಾವುದೇ ಹಾನಿಯಾಗಿಲ್ಲ.ಅದರಲ್ಲಿದ್ದ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ದ್ವಿಚಕ್ರ ವಾಹನ ಜಖಂಗೊಂಡಿದೆ. ಮರ ಬಿದ್ದ ಇನ್ನೊಂದು ಬದಿಯಲ್ಲಿ ಶಾಲೆಯೊಂದಿದ್ದು, ಮರ ಅದರ ಮೇಲೆ ಬಿದ್ದಿದ್ದರೆ ದೊಡ್ಡ ಪ್ರಮಾಣದ ಹಾನಿ ಸಂಭವಿಸುತ್ತಿತ್ತು.

ಕಾಸರಗೋಡಿನಲ್ಲಿ ನಾಳೆಯೂ ರಜೆ
ಕಾಸರಗೋಡು/ಬದಿಯಡ್ಕ: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಜುಲೈ 23ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜುಲೈ 23ರಂದೂ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರವೂ ರಜೆ ನೀಡಲಾಗಿತ್ತು. ಕಾಸರಗೋಡು ಹೊರತಾಗಿ ಕಣ್ಣೂರು ಹಾಗೂ ಕೋಯಿಕೋಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿ ಇರಲಿದ್ದು, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ರೆಡ್ ಅಲರ್ಟ್ ಘೋಷಿಸಿದ ಜಿಲ್ಲೆಗಳಲ್ಲಿ 24 ತಾಸುಗಳಲ್ಲಿ 204 ಮಿ.ಮೀ.ಗಿಂತ ಹೆಚ್ಚು ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಬಿರುಸಿನ ಗಾಳಿ ಮಳೆಯಾಗುವ ಹಿನ್ನೆಲೆಯಲ್ಲಿ ನೆರೆ ಸಹಿತ ಪ್ರಕೃತಿ ವಿಕೋಪ ಸಾಧ್ಯತೆಗಳಿದ್ದು, ಪುನರ್ವಸತಿ ಶಿಬಿರಗಳನ್ನು ಸಿದ್ಧಪಡಿಸುವಂತೆ ತಿಳಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಬದಿಯಡ್ಕದ ಪಳ್ಳತ್ತಡ್ಕ ಚಾಳಕ್ಕೋಡ್ ನಿವಾಸಿ ಕರಿಯ ಬೈರ ಎಂಬುವರ ಮನೆ ಭಾನುವಾರ ರಾತ್ರಿ ಕುಸಿದು ಬಿದ್ದಿದೆ. ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಬಾಡೂರು ಇಟ್ಟಿಕುಂಡು ಕಮಲ ಅವರ ಮನೆಯ ಒಂದು ಪಾರ್ಶ್ವಕ್ಕೆ ಗುಡ್ಡ ಕುಸಿದು ಹಾನಿಯಾಗಿದೆ. ಬದಿಯಡ್ಕ ಕರಿಂಬಿಲ ರಸ್ತೆ ಬದಿಯ ಗುಡ್ಡೆ ಜರಿದು ಬೀಳುವ ಭೀತಿಯಲ್ಲಿದೆ.

ಬಂಡೆ ತೆರವಿಗೆ ಹರಸಾಹಸ
ಮಂಗಳೂರು: ಸುಬ್ರಹ್ಮಣ್ಯ ರೋಡ್ ಮತ್ತು ಶಿರಿಬಾಗಿಲು ರೈಲ್ವೆ ಮಾರ್ಗ ನಡುವೆ ಘಾಟಿ ಪ್ರದೇಶದ ಇಕ್ಕೆಲಗಳಲ್ಲಿ ಪದೇಪದೆ ರೈಲು ಓಡಾಟಕ್ಕೆ ಆತಂಕ ತಂದೊಡ್ಡುತ್ತಿರುವ ಬೆಟ್ಟದ ಮೇಲಿನ ಹೆಬ್ಬಂಡೆಗಳ ತೆರವು ಕಾರ್ಯಾಚರಣೆ ಸೋಮವಾರ ನಿರಂತರ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯ ನಡುವೆಯೇ ಮುಂದುವರಿಯಿತು.
ಬಂಡೆಗಳನ್ನು ಒಡೆದು ತೆರವುಗೊಳಿಸುವ ಕಾಮಗಾರಿಗೆ ಬಿಡದೆ ಸುರಿಯುವ ಮಳೆ ಅಡ್ಡಿಯಾಗಿದ್ದು, ಕಾಮಗಾರಿ ಒಂದು ಹಂತ ತಲುಪಲು ಕನಿಷ್ಠ ಇನ್ನೆರಡು ದಿನ ಬೇಕಾಗಬಹುದು. ರಾತ್ರಿ ಕೂಡ ಕಾಮಗಾರಿ ಮುಂದುವರಿದಿದೆ ಎಂದು ರೈಲ್ವೆ ಇಲಾಖೆ ಮೂಲ ತಿಳಿಸಿದೆ. ಕಾಮಗಾರಿ ಮುಂದುವರಿದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳು ಭಾಗಶಃ ರದ್ದುಗೊಂಡಿದ್ದು, ಇನ್ನು ಕೆಲವು ರೈಲುಗಳ ಬದಲಿ ಮಾರ್ಗ ಸಂಚರಿಸುತ್ತಿವೆ.

ಭಾಗಶಃ ರದ್ದು: ಕೆಎಸ್‌ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ (ನಂ.16523) ಸಂಚಾರವನ್ನು ಸೋಮವಾರ ಮಂಗಳೂರು ಸೆಂಟ್ರಲ್ ಮತ್ತು ಕಾರವಾರ ನಡುವೆ ಜುಲೈ 22ರಂದು ರದ್ದುಪಡಿಸಲಾಯಿತು. ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ನಂ.16514) ರೈಲು ಸಂಚಾರವನ್ನು ಜುಲೈ 23ರಂದು ಕೂಡ ಕಾರವಾರ ಮತ್ತು ಮಂಗಳೂರು ಸೆಂಟ್ರಲ್ ನಡುವೆ ರದ್ದುಪಡಿಸಲಾಗಿದೆ.

ಮಾರ್ಗ ಬದಲು: ಕೆಎಸ್‌ಆರ್ ಬೆಂಗಳೂರು- ಕಣ್ಣೂರು/ ಕಾರವಾರ ಎಕ್ಸ್‌ಪ್ರೆಸ್ ರೈಲು ಜುಲೈ 22ರಂದು ಮೈಸೂರು, ಹಾಸನ ಮಾರ್ಗದ ಬದಲಾಗಿ ಜೋಳಾರಪೇಟೆ, ಸೇಲಂ, ಪಾಲ್ಘಾಟ್, ಶೊರ್ನೂರು ಮಾರ್ಗ ಸಂಚರಿಸಿದೆ. ಕಣ್ಣೂರು/ ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ನಂ.16512/ 16514) ಜುಲೈ 22ರಂದು ಶ್ರವಣಬೆಳಗೊಳ ಮಾರ್ಗ ಬದಲಾಗಿ ಶೊರ್ನೂರು, ಪಾಲ್ಘಾಟ್, ಸೇಲಂ, ಜೋಳಾರಪೇಟೆ ಮಾರ್ಗ ಸಂಚರಿಸಿದೆ.

Leave a Reply

Your email address will not be published. Required fields are marked *