ರಾಮಮಂದಿರ ಬಿಜೆಪಿಯ ಅಜೆಂಡಾ ಆಗಬಾರದು: ಚಿರಾಗ್​ ಪಾಸ್ವಾನ್​

ಶೇಖ್​ಪುರ್​(ಬಿಹಾರ): ರಾಮಮಂದಿರ ನಿರ್ಮಾಣದಂತಹ ವಿವಾದಾತ್ಮಕ ವಿಷಯಗಳು ಎನ್​ಡಿಎ ನೇತೃತ್ವದ ಸರ್ಕಾರಕ್ಕೆ ಹಾನಿಯನ್ನುಂಟು ಮಾಡಲಿವೆ. ಇಂತಹ ವಿಚಾರಗಳು ಲೋಕಸಭೆ ಚುನಾವಣೆಯ ಅಜೆಂಡಾ ಆಗಬಾರದು ಎಂದು ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿರುವ ಲೋಕ್​ ಜನಶಕ್ತಿ ಪಕ್ಷ(ಎಲ್​​ಜೆಪಿ) ಎಚ್ಚರಿಕೆ ನೀಡಿದೆ.

ಎಲ್​ಜೆಪಿ ನಾಯಕ ಚಿರಾಗ್​ ಪಾಸ್ವಾನ್​ ಮಾತನಾಡಿ ಛತ್ತೀಸ್​ಗಢ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ಈ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಚುನಾವಣಾ ಫಲಿತಾಂಶವು ಸ್ಪಷ್ಟವಾಗಿ ಈ ಅಂಶವನ್ನು ಸೂಚಿಸುತ್ತಿದೆ ಎಂದರು.

ನಾನು ವೈಯಕ್ತಿಕವಾಗಿ ಹೇಳುತ್ತಿದ್ದೇನೆ. ರಾಮಮಂದಿರ ನಮ್ಮ ಅಜೆಂಡಾ ಆಗಬಾರದು. ಅಭಿವೃದ್ಧಿಯೊಂದೇ ನಮ್ಮ ಅಜೆಂಡಾ ಆಗಬೇಕು. ಗ್ರಾಮೀಣ ಪ್ರದೇಶ, ರೈತರು ಹಾಗೂ ಉದ್ಯೋಗ ಸೃಷ್ಟಿಯೇ ನಮ್ಮ ಆದ್ಯತೆಯಾಗಿರಬೇಕು. ರಾಮಮಂದಿರ ವಿಷಯವೇ ಮೂರು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಕಾರಣ ಎಂದು ಪಾಸ್ವಾನ್​ ತಿಳಿಸಿದರು.

ಯುವ ಸಮುದಾಯ ಹಾಗೂ ರೈತರ ಬಗೆಗಿನ ಸಮಸ್ಯೆಗಳ ಬಗ್ಗೆ ರಾಹುಲ್​ ಗಾಂಧಿ ಅವರು ಧ್ವನಿಯೆತ್ತಿದ್ದೇ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಗೆಲುವಿಗೆ ಪ್ರಮುಖ ಕಾರಣ ಎಂದು ಪಾಸ್ವಾನ್​ ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಬಿಜೆಪಿ ಹಾಗೂ ಎಲ್​ಜೆಪಿ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ 17 ಹಾಗೂ ಎಲ್​ಜೆಪಿ 6 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಹಾಗೂ ಎಲ್​ಜಿಪಿ ಅಧ್ಯಕ್ಷ ರಾಮ್​​ ವಿಲಾಸ್​ ಪಾಸ್ವಾನ್​ ಕಳೆದ ವಾರ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದಾರೆ. (ಏಜೆನ್ಸೀಸ್​)