ಬಾಳೆಹೊನ್ನೂರು: ಆಷಾಢ ಮಾಸದ ಅಮಾವಾಸ್ಯೆ (ಆಟಿ) ಅಂಗವಾಗಿ ಹೋಬಳಿಯ ವಿವಿಧೆಡೆಯ ಜನರು ರೋಗನಿರೋಧಕ ಶಕ್ತಿ ಹೊಂದಿರುವ ಮದ್ದಾಲೆ ಮರ (ಹಾಲೆ ಮರ, ಸಪ್ತವರ್ಣ ಮರ)ದ ತೊಗಟೆಯ ಕಷಾಯವನ್ನು ಭಾನುವಾರ ಮುಂಜಾನೆ ಕುಡಿದರು.
ಮದ್ದಾಲೆ ಮರದ ತೊಗಟೆಯನ್ನು ಕೆತ್ತಿ ಕಷಾಯ ತಯಾರಿಸಿ ಕುಡಿಯುವ ಪದ್ಧತಿ ಹಿಂದಿನಿಂದಲೂ ಇದ್ದರೂ ಆಷಾಢದ ಅಮಾವಾಸ್ಯೆ ದಿನ ಇದನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಹಲವು ರೋಗ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ.ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಬ್ರಾಹ್ಮೀ ಮುಹೂರ್ತದಲ್ಲಿ, ಸೂರ್ಯೋದಯಕ್ಕೆ ಅಭಿಮುಖವಾಗಿ ಹೋಗಿ ಮದ್ದಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತಂದು ಮನೆಯಲ್ಲಿ ಔಷಧ ತಯಾರಿಸಬೇಕು ಎಂಬ ಬಗ್ಗೆ ಹಲವು ಪುಸ್ತಕಗಳಲ್ಲಿಯೂ ಉಲ್ಲೇಖವಿದೆ. ಮದ್ದಾಲೆ ಮರದಲ್ಲಿ ಏಳು ಎಲೆಗಳು ಇರುವ ಕಾರಣ ಸಂಸ್ಕೃತದಲ್ಲಿ ಸಪ್ತವರ್ಣ ಎನ್ನುತ್ತಾರೆ. ಮದ್ದಾಲೆ ಮರದಲ್ಲಿ ಕಾಯಿಲೆಗಳನ್ನು ನಿವಾರಿಸುವ ಗುಣ, ವೈರಾಣು ನಿರೋಧಕ, ಕ್ಯಾನ್ಸರ್ ನಿರೋಧಕ ಮತ್ತು ಕ್ಯಾನ್ಸರ್ ಗಡ್ಡೆಯ ಗಾತ್ರ ಕಡಿಮೆ ಮಾಡುವ ಗುಣ, ಯಕೃತ್ ರಕ್ಷಿಸುವ ಗುಣ, ಅತಿಸಾರ ನಿರೋಧಕ, ಜ್ವರ ಕಡಿಮೆ ಮಾಡುವ ಗುಣ ಹೊಂದಿದೆ.ಆಟಿ ಅಮಾವಾಸ್ಯೆ ಆಚರಣೆ ದೇಶಾದ್ಯಂತ ಇದ್ದರೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ಈ ರೀತಿ ಕಷಾಯ ಕುಡಿಯುವ ಮೂಲಕ ಆಟಿ ಆಚರಿಸುತ್ತಿರುವುದು ವಿಶೇಷ.ಮದ್ದಾಲೆ ಮರದ ತೊಗಟೆ ಕೆತ್ತಿ ತಂದ ಬಳಿಕ ಅದನ್ನು ಜಜ್ಜಿ ಕೆಲವು ಔಷಧೀಯ ಮಸಾಲೆ ಪದಾರ್ಥ ವಸ್ತುಗಳನ್ನು ಸೇರಿಸಿ ರಸ ತೆಗೆಯುತ್ತಾರೆ. ಹೀಗೆ ತೆಗೆದ ರಸವನ್ನು ಓರ್ವ 24 ಮಿಲಿ ಸೇವಿಸಬಹುದು. ಕುದಿಸಿ ಕಷಾಯ ಮಾಡಿದರೆ 50 ಮಿಲಿ ಸೇವನೆ ಮಾಡಬಹುದು.ಪಟ್ಟಣದ ವಿವಿಧ ಪ್ರಮುಖ ಮನೆಗಳಲ್ಲಿ ಔಷಧ ವಿತರಿಸಲಾಯಿತು. ಮಾರಿಗುಡಿ ರಸ್ತೆಯ ಹಿರಿಯಣ್ಣ, ಶಾಂತಿನಗರದ ಶಿವಪ್ಪ, ಬಸ್‌ನಿಲ್ದಾಣದ ಅಂಗಡಿ ಮಾಲೀಕ ಶಿವಾನಂದ್ ಅವರು ನೂರಾರು ಜನರಿಗೆ ಔಷಧ ವಿತರಿಸಿದರು.