ವಿಷ ಸೇವಿಸಿ ಮಹಿಳೆ ಸಾವು, ದೂರು ದಾಖಲು

ಕೊಕಟನೂರ: ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮದಲ್ಲಿ ಕವಲಗುಡ್ಡ ಗ್ರಾಮದ ವಿವಾಹಿತೆಯೋರ್ವರು ಗುರುವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.
ಮೂಲತಃ ಕವಲಗುಡ್ಡ ಗ್ರಾಮದ ಸುನೀತಾ ಪ್ರಭು ಪಾಶ್ಚಾಪುರ (35) ಮೃತ ಮಹಿಳೆ.

ನಾಲ್ಕು ವರ್ಷಗಳಿಂದ ಪತಿಯ ಮನೆ ತೊರೆದು ಹೋಗಿದ್ದ ಮಹಿಳೆ ಗುರುವಾರ ರಾತ್ರಿ ಯಲ್ಲಮ್ಮನವಾಡಿ ಗ್ರಾಮದಲ್ಲಿ ವಿಷ ಸೇವಿಸಿ ರಸ್ತೆ ಮಧ್ಯೆ ಬಿದ್ದಿದ್ದಳು. ಗ್ರಾಮಸ್ಥರು ಪ್ರಥಮ ಚಿಕಿತ್ಸೆಯನ್ನು ಕೊಕಟನೂರ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ, ಅಲ್ಲಿಂದ 108 ಆಂಬುಲೆನ್ಸ್‌ನಲ್ಲಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

ಸಾವಿಗೆ ಕಾರಣ ತಿಳಿದುಬಂದಿಲ್ಲ. ಆದರೆ ಸುನೀತಾಳ ಸಂಬಂಧಿಕರು ಐಗಳಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಸುನೀತಾಳ ಸಾವು ಸಂಶಯಾಸ್ಪದವಾಗಿದ್ದು, ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ದೊರಕಿಸಿಕೊಡಬೇಕು ಎಂದು ಉಲ್ಲೇಖಿಸಿದ್ದಾರೆ.

ಐಗಳಿ ಠಾಣೆ ಹವಾಲ್ದಾರ ಅರ್ಜುನ ಬಾಡಗಿ ಹಾಗೂ ಅಥಣಿ ಠಾಣೆಯ ಎಂ.ಬಿ. ಬಾಲದಾರ ಭೇಟಿ ನೀಡಿ ಪರಿಶೀಲಿಸಿದರು. ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.