ಕಳಪೆ ಕಾಮಗಾರಿ ತಡೆದ ಗ್ರಾಮಸ್ಥರು

ಸಾವಳಗಿ: ಗ್ರಾಮದ ಭಜಂತ್ರಿ ಓಣಿಯಲ್ಲಿ ನಿರ್ವಣಗೊಳ್ಳುತ್ತಿರುವ ಶುದ್ಧ ಕುಡಿವ ನೀರಿನ ಘಟಕದ ಕಾಮಗಾರಿ ಕಳಪೆಯಾಗಿರುವ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಸದಸ್ಯರು ಶನಿವಾರ ಕಾಮಗಾರಿ ತಡೆದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

12 ಲಕ್ಷ ರೂ. ಅನುದಾನದಲ್ಲಿ ನಿರ್ವಣಗೊಳ್ಳುತ್ತಿರುವ ಘಟಕಕ್ಕೆ ಜಿಪಿಎಸ್ ಅಳವಡಿಸಬೇಕು. 5 ಸಾವಿರ ಲೀಟರ್ ನೀರು ಶುದ್ಧೀಕರಣ ಘಟಕದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಟ್ಟಡದ ತಳಪಾಯ ಕಟ್ಟಡ ಸರಿಯಾಗಿಲ್ಲ. ಕಟ್ಟಡಕ್ಕೆ ಬಳಸುವ ಎಲ್ಲ ವಸ್ತುಗಳು ಹಳೆಯದಾಗಿವೆ. ಕಬ್ಬಿಣ ವಸ್ತುಗಳು ಹಾಳಾಗಿವೆ. ಬಹಳ ವರ್ಷದ ಹಿಂದಿನ ಟ್ಯಾಂಕರ್ ಅಳವಡಿಸಿದ್ದಾರೆ. ಕಿಟಕಿ, ಬಾಗಿಲುಗಳು ಉದ್ಘಾಟನೆ ಮುನ್ನವೇ ಹಾಳಾಗಿವೆ. ಇದರಿಂದಾಗಿ ಕಾಮಗಾರಿ ತಡೆದಿರುವುದಾಗಿ ಗ್ರಾಮಸ್ಥರು ವಿಜಯವಾಣಿಗೆ ತಿಳಿಸಿದರು.

ಸರ್ಕಾರ ಗ್ರಾಮಗಳ ಅಭಿವೃದ್ಧಿಗಾಗಿ ಇಂತಹ ಯೋಜನೆ ಜಾರಿಗೆ ತಂದಿದ್ದರೆ ಗುತ್ತಿಗೆದಾರರು ಮಾತ್ರ ಅನುದಾನವನ್ನು ನುಂಗಿ ನೀರು ಕುಡಿಯಲು ಹೊರಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳುತ್ತಿಲ್ಲ. ಹಂತ ಹಂತವಾದ ಕಾಮಗಾರಿ ಫೋಟೊ ವೀಕ್ಷಿಸಿ ಬಿಲ್ ತೆಗೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಹಳೆಯ ವಸ್ತುಗಳನ್ನು ಬದಲಾಯಿಸುತ್ತೇವೆ. ಕಾಮಗಾರಿ ಕಳಪೆಯಾಗಿದ್ದರೆ ಪರೀಕ್ಷಿಸಿ ಸರಿಪಡಿಸುತ್ತೇವೆ.

| ಸುರೇಶ ಪಂಚಾಳ ಇಂಜಿನಿಯರ್ ಜಮಖಂಡಿ

ಕಾಮಗಾರಿ ಗುತ್ತಿಗೆದಾರರಿಗೆ ಕನ್ನಡ ಮಾತನಾಡಲು ಬರುತ್ತಿದ್ದರೂ ಹಿಂದಿಯಲ್ಲಿ ಮಾತನಾಡುತ್ತಾರೆ. ವಸ್ತುಗಳು ಕಳಪೆಯಾಗಿವೆ ಎಂದು ಕೇಳಿದರೆ ಕೇಳಲು ನೀವ್ಯಾರು. ನಮ್ಮ ಮನಸ್ಸಿಗೆ ಬಂದಂತೆ ನಾವು ಮಾಡುತ್ತೇವೆ ಎಂದು ಉಡಾಫೆಯಾಗಿ ಮಾತನಾಡುತ್ತಾರೆ.

| ಪ್ರತಿಭಟನಾನಿರತ ಗ್ರಾಮಸ್ಥರು