More

  ಮೈಸೂರಿನ ರಿಂಗ್‌ರೋಡ್ ಡೆಬ್ರಿಸ್ ತಾಣ

  ಸದೇಶ್ ಕಾರ್ಮಾಡ್ ಮೈಸೂರು
  ಸಾಂಸ್ಕೃತಿಕ ನಗರಿ ಮೈಸೂರಿನ ಹೊರ ವರ್ತುಲ ರಸ್ತೆಯು (ರಿಂಗ್‌ರೋಡ್) ಡೆಬ್ರಿಸ್ ತಾಣವಾಗಿ ಮಾರ್ಪಾಡು ಹೊಂದುತ್ತಿದ್ದು, ಬೆಟ್ಟದ ರೀತಿಯಲ್ಲಿ ಬೆಳೆಯುತ್ತಿರುವ ಕಟ್ಟಡ ತ್ಯಾಜ್ಯವು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.

  ಹೊರ ವರ್ತುಲ ರಸ್ತೆಯ ಬಹುತೇಕ ಭಾಗವು ನಗರದ ಸುತ್ತಮುತ್ತಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಕೆಲವು ಭಾಗಗಳು ಮಾತ್ರ ನಗರ ಪಾಲಿಕೆಗೆ ಸೇರಿದೆ. ಆದರೆ, ಪಟ್ಟಣ ಪಂಚಾಯಿತಿಗಳು ಹೊರ ವರ್ತುಲ ರಸ್ತೆಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರದ ಹಿನ್ನೆಲೆಯಲ್ಲಿ ದಿನೇ ದಿನೆ ಹೊರ ವರ್ತುಲ ರಸ್ತೆಯಲ್ಲಿ ಕಟ್ಟಡ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಲೇ ಇದೆ.

  ಈ ಹಿಂದೆ ನಗರದ ಚಾಮುಂಡಿಬೆಟ್ಟದ ತಪ್ಪಲು, ಕಾರಂಜಿ ಕೆರೆಯ ವ್ಯಾಪ್ತಿಯಲ್ಲಿ ಜನರು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರು. ನಗರ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿದ ನಂತರ ಆ ಜಾಗದಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಬಿತ್ತು. ಆ ನಂತರ ಜನರು ಹೊರ ವರ್ತುಲ ರಸ್ತೆಯಲ್ಲಿ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲು ಪ್ರಾರಂಭಿಸಿದ್ದಾರೆ.

  ಕಟ್ಟಡ ತ್ಯಾಜ್ಯದ ಜನತೆಗೆ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಉತ್ಪತಿಯಾಗುವ ತ್ಯಾಜ್ಯವನ್ನು ಸಹ ದೊಡ್ಡ ಪ್ರಮಾಣದಲ್ಲಿ ತಂದು ಹೊರ ವರ್ತುಲ ರಸ್ತೆಯಲ್ಲಿ ಸುರಿಯಲಾಗುತ್ತಿದ್ದು, ತ್ಯಾಜ್ಯದಿಂದ ದುರ್ನಾತ ಬೀರುತ್ತಿದೆ. ತ್ಯಾಜ್ಯದ ಪೈಕಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಇದೆ. ಈ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿಕೊಂಡು ಪರಿಸರವನ್ನು ನಾಶ ಮಾಡುತ್ತಿದೆ.

  ನಗರಕ್ಕೆ ಆಗಮಿಸುವ ಪ್ರತಿಯೊಬ್ಬರು ಹೊರ ವರ್ತುಲ ರಸ್ತೆಯನ್ನು ಹಾದು ಬರುತ್ತಾರೆ. ಪ್ರತಿಯೊಬ್ಬರಿಗೂ ಅಶುಚಿತ್ವ ಕಣ್ಣಿಗೆ ರಾಚುತ್ತದೆ. ನಗರ ಪಾಲಿಕೆಯ ಗಡಿ ತಿಳಿಯದ ಸಾಕಷ್ಟು ಜನರು ಮೈಸೂರು ನಗರ ಇಷ್ಟೊಂದು ಅಶುಚಿತ್ವದಿಂದ ಕೂಡಿದೆಯೇ ಎಂದು ಆಶ್ಚರ್ಯಗೊಳ್ಳುವುದು ಸಹಜ.

  ನಗರದ ಹೊರ ವರ್ತುಲ ರಸ್ತೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ನಗರ ಪಾಲಿಕೆ ಹಾಗೂ ಹೊರ ವರ್ತುಲ ರಸ್ತೆಯ ಸುತ್ತಲಿನ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳ ಸಭೆಯನ್ನು ಸಂಸದ ಪ್ರತಾಪ್ ಸಿಂಹ ಹಲವು ಬಾರಿ ಕರೆದು ನಿರ್ದೇಶನ ನೀಡಿದರೂ ಹೊರ ವರ್ತುಲ ರಸ್ತೆಯಲ್ಲಿ ಸ್ವಚ್ಛತೆ ಕಾಣಲು ಸಾಧ್ಯವಾಗಿಲ್ಲ. ಪ್ರತಾಪ್ ಸಿಂಹ ನೇತೃತ್ವದಲ್ಲಿ ಮೂರ‌್ನಾಲ್ಕು ಬಾರಿ ಹೊರ ವರ್ತುಲ ರಸ್ತೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆದರೂ ಸ್ವಚ್ಛತೆ ವಿಚಾರದಲ್ಲಿ ಜನರು ಸಹಕಾರ ನೀಡುತ್ತಿಲ್ಲ. ಸ್ವಚ್ಛತೆಗೆ ಸಹಕಾರ ನೀಡದೆ ಇರುವವರಿಗೆ ದಂಡದ ಮೂಲಕ ಎಚ್ಚರಿಕೆ ನೀಡುವ ಕಾರ್ಯ ಆಗಬೇಕಾಗಿದೆ.

  ಹೊರ ವರ್ತುಲ ರಸ್ತೆಯ ಸುತ್ತಮುತ್ತಲಿನ ಹೊಸ ಬಡಾವಣೆಗಳಲ್ಲಿ ಹಲವಾರು ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ಮನೆ ನಿರ್ಮಾಣ ಸಂದರ್ಭ ಉತ್ಪತಿಯಾಗುವ ಕಟ್ಟಡ ತ್ಯಾಜ್ಯ ಹಾಗೂ ಹಳೆಯ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸುವ ಸಂದರ್ಭ ಉತ್ಪತಿಯಾಗುವ ತ್ಯಾಜ್ಯವೆಲ್ಲವೂ ವರ್ತುಲ ರಸ್ತೆಯಲ್ಲಿ ಸಂಗ್ರಹವಾಗುತ್ತಿದೆ.

  ಡೆಬ್ರಿಸ್ ಘಟಕ ಕಾರ್ಯಾರಂಭಗೊಳ್ಳಲಿ

  ಕಟ್ಟಡ ತ್ಯಾಜ್ಯ (ಡೆಬ್ರಿಸ್) ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಂಚ್ಯಾ-ಸಾತಗಳ್ಳಿ ಬಳಿ ಜಾಗ ಗುರುತಿಸಲಾಗಿದೆ. ಕಟ್ಟಡ ಭಗ್ನಾವಶೇಷಗಳ ತ್ಯಾಜ್ಯ ನಿರ್ವಹಣಾ ನಿಯಮ 2016ರ ಮಾರ್ಗಸೂಚಿಯಂತೆ 100 ಟಿಪಿಡಿ ಸಾಮರ್ಥ್ಯದ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ನಗರ ಪಾಲಿಕೆ ತಯಾರಿ ಕೈಗೊಂಡಿದೆ. ಈ ಘಟಕ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 9.5 ಎಕರೆ ಜಾಗವನ್ನು 30 ವರ್ಷಗಳ ಅವಗೆ ಗುತ್ತಿಗೆ ಆಧಾರದಲ್ಲಿ ನೀಡಿದೆ. ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಘಟಕವನ್ನು 10.78 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಘಟಕ ಸ್ಥಾಪನೆ ಮಾಡಲಿರುವ ಖಾಸಗಿ ಸಂಸ್ಥೆಯು ಕಟ್ಟಡ ತ್ಯಾಜ್ಯ ಸಂಸ್ಕರಣೆ ಮಾಡಿ ವಿಲೇವಾರಿ ಮಾಡಲಿದೆ. ಪ್ರತಿ ಟನ್ ಡೆಬ್ರಿಸ್‌ಗೆ ಟಿಪ್ಪಿಂಗ್ ಶುಲ್ಕ ನೀಡಬೇಕಾಗುತ್ತದೆ. ಈ ಘಟಕೆ ಶೀಘ್ರ ಕಾರ್ಯಾರಂಭಗೊಂಡರೆ ಡೆಬ್ರಿಸ್ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

  ಹೊರ ವರ್ತುಲ ರಸ್ತೆ ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಂಡಿಲ್ಲ. ದಟ್ಟಗಳ್ಳಿಯ ಕೆಲವು ಭಾಗಗಳು ಮಾತ್ರ ಪಾಲಿಕೆ ವ್ಯಾಪ್ತಿಗೆ ಒಳಪ ಡುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನ ಶುಚಿಗೊಳಿಸಲಾಗುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುವರಿಗೆ ದಂಡ ವಿಧಿಸುವ ಕಾರ್ಯ ಮಾಡಲಾಗುವುದು. ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಂಚ್ಯ-ಸಾತಗಳ್ಳಿಯಲ್ಲಿ ಜಾಗ ಗುರುತಿಸಲಾಗಿದ್ದು, ಅಲ್ಲಿ ಘಟಕ ನಿರ್ಮಾಣ ಕಾರ್ಯ ಆಗಬೇಕಾಗಿದೆ.
  ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರಪಾಲಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts