ತಲಾಕಾವೇರಿ ಕೇತ್ರದ ಸಮೀಪ ರೆಸಾರ್ಟ್ ನಿರ್ಮಾಣ: ವಿರೋಧಿಸಿ ಪ್ರತಿಭಟನೆ

ಮಡಿಕೇರಿ: ಭಾಗಮಂಡಲ ವ್ಯಾಪ್ತಿಯ ತಲಕಾವೇರಿ ತಪ್ಪಲಿನಲ್ಲಿ ಕಂದಾಯ ನಿರೀಕ್ಷಕ ಜಿ.ಟಿ.ಸತೀಶ್ ಎಂಬುವರು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿರುವುದನ್ನು ಖಂಡಿಸಿ ತಲಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಪ್ರಮುಖರಾದ ಉಳ್ಳಿಯಡ ಪೂವಯ್ಯ, ಭಾಗಮಂಡಲದ ಕೋರಂಗಾಲ ವ್ಯಾಪ್ತಿಯ ಕೋಳಿಕಾಡು ಎಂಬಲ್ಲಿ ಕಂದಾಯ ನಿರೀಕ್ಷಕ ಜಿ.ಟಿ.ಸತೀಶ್ ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ತಲಕಾವೇರಿ ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ಉಂಟು ಮಾಡುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿರುವ ಅಧಿಕಾರಿಯನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಸಂಚಾಲಕ ಕೊಕ್ಕಲೇರ ಕಾರ್ಯಪ್ಪ, ಸದಸ್ಯರಾದ ಉದಿಯಂಡ ಸುಭಾಷ್, ದೊರೆ ಸೋಮಣ್ಣ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *