ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಇಲ್ಲ: ಪ್ರಧಾನಿ ಮೋದಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಹೊಸವರ್ಷದಂದು ಎಎನ್​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ನ್ಯಾಯಾಂಗ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅಯೋಧ್ಯಾ ರಾಮಭೂಮಿ ಸ್ಥಳದ ವಿವಾದ ಇನ್ನೂ ಸುಪ್ರೀಂಕೋರ್ಟ್​ನಲ್ಲಿದ್ದು ಜನವರಿ ಮೊದಲ ವಾರದಲ್ಲಿ ವಿಚಾರಣೆ ಪ್ರಾರಂಭಿಸುವುದಾಗಿ ಕೋರ್ಟ್​ ತಿಳಿಸಿತ್ತು. ಈ ಮಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು. ಆರ್​ಎಸ್​ಎಸ್​, ಶಿವಸೇನೆ ಮತ್ತಿತರ ಸಂಘಟನೆಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದವು. ಆದರೆ ಇದುವರಗೆ ಪ್ರಧಾನಿ ಮೋದಿ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ.

ಈಗ ಮೌನ ಮುರಿದ ಪ್ರಧಾನಿ, ನ್ಯಾಯಾಂಗ ಪ್ರಕ್ರಿಯೆಗಳು ಮುಗಿದುಹೋಗಲಿ. ಅದಾದ ಬಳಿಕ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಲಿದೆ. ರಾಮಮಂದಿರ ನಿರ್ಮಾಣಕ್ಕಾಗಿ ನಾವು ಎಲ್ಲ ಪ್ರಯತ್ನಗಳನ್ನೂ ಮಾಡಲು ಸಿದ್ಧ. ಅಯೋಧ್ಯಾ ರಾಮಮಂದಿರಕ್ಕೆ ಸಂಬಂಧಪಟ್ಟಂತೆ ಸಂವಿಧಾನದ ಪರಿಮಿತಿಯೊಳಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಈ ಹಿಂದೆಯೇ ನಾವು ತಿಳಿಸಿದ್ದೇವೆ ಎಂದು ಹೇಳಿದರು.

ಮಂದಿರ ನಿರ್ಮಾಣ ವಿಳಂಬವಾಗಲು ಕಾಂಗ್ರೆಸ್​ ಕಾರಣ. ಕೋರ್ಟ್​ನಲ್ಲಿ ಕಾಂಗ್ರೆಸ್​ ವಕೀಲರು ವಿಚಾರಣೆ ವೇಳೆ ಅಡೆತಡೆ ತಂದಿದ್ದಾರೆ. ಹಾಗಾಗಿಯೇ ವಿಳಂಬವಾಗಿದೆ ಎಂದರು.

ನಾನು ಕಾಂಗ್ರೆಸ್​ ಮುಖಂಡರ ಬಳಿ ಬೇಡಿಕೊಳ್ಳುತ್ತೇನೆ, ಅಯೋಧ್ಯಾ ರಾಮಮಂದಿರ ವಿಷಯವನ್ನು ರಾಜಕೀಯವಾಗಿ ತೂಕ ಹಾಕಬೇಡಿ. ಇದು ದೇಶದ ಶಾಂತಿ, ಅನ್ಯೋನ್ಯತೆಯ ವಿಷಯ. ಅಯೋಧ್ಯಾ ಪ್ರಕರಣ ವಿಚಾರಣೆ ಕೋರ್ಟ್​ನಲ್ಲಿ ಸುಸೂತ್ರವಾಗಿ ನಡೆಯುವುದನ್ನು ಕಾಂಗ್ರೆಸ್​ ವಕೀಲರು ತಡೆಯದಂತೆ ಆ ಪಕ್ಷ ನಿಗಾವಹಿಸಬೇಕು ಎಂದು ಹೇಳಿದರು.

One Reply to “ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಇಲ್ಲ: ಪ್ರಧಾನಿ ಮೋದಿ”

Comments are closed.