
ಮೂಡಿಗೆರೆ: ತಾಲೂಕಿನ ಕಿರುಗುಂದ ಗ್ರಾಪಂ ಕಚೇರಿ ಕಟ್ಟಡ ಕಾಮಗಾರಿ ಅರ್ಧ ಮುಗಿದಿದ್ದು, ಕಾಮಗಾರಿ ಮುಂದುವರಿಸಲು ಅನುದಾನದ ಕೊರತೆಯಿದೆ. ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಬೇಕು ಎಂದು ಕಿರುಗುಂದ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಬುಧವಾರ ಶಾಸಕಿ ನಯನಾ ಮೋಟಮ್ಮಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಸ್ವಾತಿ ಶ್ರೀಮಾತನಾಡಿ, ಗ್ರಾಪಂ ಕಚೇರಿ ಹಳೆ ಕಟ್ಟಡ ಚಿಕ್ಕದಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯ 30 ಲಕ್ಷ ರೂ. 15ನೇ ಹಣಕಾಸು ಯೋಜನೆಯ 5 ಲಕ್ಷ ರೂ. ಅನುದಾನ ಬಳಸಿ ಅರ್ಧ ಕಾಮಗಾರಿ ನಡೆಸಲಾಗಿದೆ. ಕಟ್ಟಡದ ಪೂರ್ಣ ಕಾಮಗಾರಿಗೆ ಇನ್ನೂ 20 ಲಕ್ಷ ರೂ. ಅನುದಾನದ ಅಗತ್ಯವಿದೆ. ಶಾಸಕರ ನಿಧಿಯಿಂದ 10ಲಕ್ಷ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮೂಡಿಗೆರೆ ಕ್ಷೇತ್ರದಲ್ಲಿ 49 ಗ್ರಾಪಂಗಳಿವೆ. ಬೆಟ್ಟಗೆರೆ, ಬಾಳೂರು, ಕೂವೆ ಗ್ರಾಪಂ ಕಚೇರಿ ಕಟ್ಟಡಕ್ಕೆ ಶಾಸಕರ ನಿಧಿಯಿಂದ ತಲಾ 5 ಲಕ್ಷ ರೂ.ಅನುದಾನ ನೀಡಲಾಗಿದೆ. ಸದ್ಯದಲ್ಲೇ ಶಾಸಕರ ನಿಧಿ ಬಿಡುಗಡೆಯಾಗಲಿದೆ. ನಂತರ ಕ್ರಿಯಾ ಯೋಜನೆ ತಯಾರಿಸಿ ಕಿರುಗುಂದ ಗ್ರಾಪಂ ಕಟ್ಟಡಕ್ಕೆ ಅನುದಾನ ಒದಗಿಸಲಾಗುವುದು. ಉದುಸೆ ಗ್ರಾಮದ 2 ರಸ್ತೆಗೆ ಅನುದಾನ ಒದಗಿಸಲಾಗಿದೆ. ಅದರಲ್ಲಿ ಎರಡು ಕಡೆ ಕಾಲನಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಗ್ರಾಮದ 3 ಕಿ.ಮೀ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಪೂರ್ಣೇಶ್, ಸದಸ್ಯರಾದ ಕೆ.ಆರ್.ದಿನೇಶ್, ಚಂದ್ರಿಕಾ, ಕಾರ್ಯದರ್ಶಿ ನಂಜಯ್ಯ, ಮಾಜಿ ತಾಪಂ ಅಧ್ಯಕ್ಷ ಸುಬ್ರಾಯಗೌಡ, ಮಾಜಿ ಗ್ರಾಪಂ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್, ಗ್ರಾಮಸ್ಥರಾದ ಕಿರುಗುಂದ ಅಬಾಸ್, ಕೆ.ಆರ್.ಲೋಕೇಶ್, ಕೆ.ಬಿ.ಮಂಜುನಾಥ್, ಸಿ.ಎಲ್.ಪೂರ್ಣೇಶ್ ಇತರರಿದ್ದರು.