More

  ಕೆ.ಆರ್.ಆಸ್ಪತ್ರೆಯಲ್ಲಿ ಶತಮಾನೋತ್ಸವ ಬ್ಲಾಕ್ ನಿರ್ಮಾಣ: ಒಂದೇ ಕಡೆ ಇಡೀ ಒಪಿಡಿ

  ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


  ‘ದೊಡ್ಡಾಸ್ಪತ್ರೆ’ ಎಂದೇ ಜನಪ್ರಿಯವಾಗಿರುವ ನಗರದ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿ ಹೊರರೋಗಿಗಳ ವಿಭಾಗ(ಒಪಿಡಿ) ಕಟ್ಟಡ ತಲೆ ಎತ್ತಲಿದೆ. ಇದಕ್ಕೆ ‘ಶತಮಾನೋತ್ಸವ ಬ್ಲಾಕ್’ ಎಂದು ಹೆಸರಿಡಲು ನಿಶ್ಚಯಿಸಲಾಗಿದೆ.


  ಇದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ (ಎಂಎಂಸಿ ಆರ್‌ಐ) ಶತಮಾನೋತ್ಸವ ಕೊಡುಗೆಯಾಗಿದೆ. ಈ ಕಟ್ಟಡ ನಿರ್ಮಾಣಗೊಂಡರೆ ಬಹಳಷ್ಟು ರೋಗಿಗಳಿಗೆ ಅನುಕೂಲವಾಗಿದೆ.


  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1924ರಲ್ಲಿ ಸ್ಥಾಪನೆ ಮಾಡಿದ ಮೈಸೂರು ವೈದ್ಯಕೀಯ ಕಾಲೇಜಿಗೆ ಇದೀಗ ಶತಮಾನೋತ್ಸವ ಸಂಭ್ರಮ. ರಾಜ್ಯದ ಮೊದಲನೇ ಮತ್ತು ದೇಶದಲ್ಲೇ 7ನೇ ವೈದ್ಯಕೀಯ ಕಾಲೇಜು ಎಂಬ ಹಿರಿಮೆ-ಗರಿಮೆಯನ್ನು ಹೊಂದಿದೆ. ಈ ರೀತಿಯ ಭವ್ಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಸಂಸ್ಥೆ ಅದ್ದೂರಿಯಾಗಿ ಶತಮಾನೋತ್ಸವ ಆಚರಣೆ ಮಾಡಿಕೊಳ್ಳಲು ಮುಂದಾಗಿದೆ. ಶತಮಾನೋತ್ಸವಕ್ಕೆ 2023ರ ಆಗಸ್ಟ್ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಚಾಲನೆ ನೀಡಿದ್ದು, ವರ್ಷಪೂರ್ತಿ ವಿವಿಧ ಕಾರ್ಯಕ್ರಮ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.


  ಶತಮಾನೋತ್ಸವದ ನೆನಪು ಚಿರಸ್ಥಾಯಿಯಾಗಿ ಉಳಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಸಂಸ್ಥೆಯ ಅಧೀನದಲ್ಲಿ ‘ಶತಮಾನೋತ್ಸವ ಬ್ಲಾಕ್’ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಅಲ್ಲದೆ, ತುರ್ತಾಗಿ ಈ ಕಟ್ಟಡ ನಿರ್ಮಿಸಲು ಚಿಂತನೆ ನಡೆದಿದೆ. ಅದಕ್ಕಾಗಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಈಗಾಗಲೇ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಅಂದಾಜು 75 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಆಲೋಚಿಸಲಾಗಿದೆ. ಇದಕ್ಕೆ ಶೀಘ್ರದಲ್ಲೇ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ತೀರ್ಮಾನಿಸಲಾಗಿದೆ.


  ಒತ್ತಡ ತಗ್ಗಿಸಲು ಕ್ರಮ:


  ಕೆ.ಆರ್.ಆಸ್ಪತ್ರೆ ಮೈಸೂರಿಗಷ್ಟೇ ಸಿಮೀತವಾಗಿಲ್ಲ. ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ಹೀಗಾಗಿ, ಈ ಆಸ್ಪತ್ರೆಯ ಮೇಲೆ ಒತ್ತಡ ಅಧಿಕವಾಗಿದೆ. ಆದ್ದರಿಂದ ಈಗಿರುವ 1,200 ಹಾಸಿಗೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಹೊಸ ಕಟ್ಟಡ ನಿರ್ಮಾಣದೊಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಬ್ಲಾಕ್ ನಿರ್ಮಾಣವಾಗಲಿದೆ.


  ಒಂದೇ ಕಡೆ ಇಡೀ ಒಪಿಡಿ:


  ಈಗ ನಿರ್ಮಾಣವಾಗುವ ಒಪಿಡಿ ಬ್ಲಾಕ್‌ನಲ್ಲೇ ಕೆಆರ್ ಆಸ್ಪತ್ರೆಯ ಸಕಲ ಹೊರರೋಗಿಗಳಿಗೆ ವೈದ್ಯಕೀಯ ಸೇವೆ ದೊರೆಯಲಿದೆ. ವಿವಿಧ ಆರೋಗ್ಯ ಸೇವೆಗಾಗಿ ಅಲೆಯುವುದನ್ನು ತಪ್ಪಿಸಲು ಇದು ಉಪಕ್ರಮವಾಗಿದೆ. ಅದಕ್ಕಾಗಿ ಕೆ.ಆರ್. ಆಸ್ಪತ್ರೆಯ ಎಲ್ಲ ಹೊರರೋಗಿಗಳ ವಿಭಾಗ(ಒಪಿಡಿ) ಒಂದೆಡೆ ಕಾರ್ಯನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.


  ಹೊರರೋಗಿಗಳ ಒತ್ತಡ ಅಧಿಕ:


  ಕೆ.ಆರ್. ಆಸ್ಪತ್ರೆಗೆ ಪ್ರತಿದಿನ ಬರುವ ಹೊರರೋಗಿಗಳ ಸಂಖ್ಯೆಯೇ ಬರೋಬ್ಬರಿ 2600 ದಾಟುತ್ತದೆ. ವಿವಿಧೆಡೆಯಿಂದ ಬರುವ ರೋಗಿಗಳು ಹಲವು ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ಪಡೆದು ತೆರಳುತ್ತಾರೆ. ಆಸ್ಪತ್ರೆಯಲ್ಲಿ ನಿತ್ಯ ದಾಖಲಾಗುವ ಒಳರೋಗಿಗಳ ಸಂಖ್ಯೆಗಿಂತ ಹೊರರೋಗಿಗಳ ಸಂಖ್ಯೆಯೇ ಅಧಿಕ. ನಿತ್ಯ 300 ಒಳರೋಗಿಗಳು ದಾಖಲಾಗುತ್ತಿದ್ದಾರೆ. ಹೀಗಾಗಿ, ಇಲ್ಲಿ ಒಳರೋಗಿಗಳ ನಿರ್ವಹಣೆ ಅಂತಹ ಸಮಸ್ಯೆಯಲ್ಲ. ಆದರೆ, ಹೊರರೋಗಿಗಳ ನಿರ್ವಹಣೆಯೇ ಬಲು ಸವಾಲಿನ ಕೆಲಸವಾಗಿದೆ. ಅಷ್ಟರ ಮಟ್ಟಿಗೆ ಇವರ ದಟ್ಟಣೆ ಹೆಚ್ಚಿರುತ್ತದೆ.

  ಇದು ಇಡೀ ಕೆಆರ್ ಆಸ್ಪತ್ರೆಯ ವೈದ್ಯಕೀಯ, ಆಡಳಿತ ವ್ಯವಸ್ಥೆ ಮೇಲೆ ಒತ್ತಡವನ್ನು ದ್ವಿಗುಣಗೊಳಿಸುತ್ತದೆ. ಇದರಿಂದ ವೈದ್ಯರು, ಸಿಬ್ಬಂದಿಗೂ ಕೆಲಸದ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೊರರೋಗಿಗಳ ಸೇವೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಕಟ್ಟಡ, ಮೂಲಸೌಕರ್ಯ ಅಗತ್ಯ ಇದೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.


  ಆಸ್ಪತ್ರೆ ಸಾಮರ್ಥ್ಯ ವೃದ್ಧಿ;

  ಎಂಎಂಸಿಆರ್‌ಐ ಮತ್ತು ಇದರ ಅಧೀನದಲ್ಲಿರುವ ಕೆಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಪಿಕೆಟಿಬಿ ಆಸ್ಪತ್ರೆಗಳಲ್ಲಿ ಶತಮಾನೋತ್ಸವ ಅಂಗವಾಗಿ ರಾಜ್ಯ ಸರ್ಕಾರದ 89 ಕೋಟಿ ರೂ. ಅನುದಾನದಲ್ಲಿ 14 ನವೀಕರಣ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ. ಇದರೊಂದಿಗೆ, ಶತಮಾನೋತ್ಸವ ಬ್ಲಾಕ್ ನಿರ್ಮಾಣದಿಂದ ಕೆಆರ್ ಆಸ್ಪತ್ರೆಯ ಕಾರ್ಯವ್ಯಾಪ್ತಿ ಇನ್ನಷ್ಟು ಹಿಗ್ಗಲಿದೆ.

  ದಸರಾ ಮಾದರಿಯಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ

  ಮೈಸೂರು ವೈದ್ಯಕೀಯ ಕಾಲೇಜು ಅನೇಕ ಮೈಲಿಗಲ್ಲು ಸ್ಥಾಪಿಸಿದೆ. 1949ರಲ್ಲಿ ರಜತ ಮಹೋತ್ಸವ, 1974ರಲ್ಲಿ ಸುವರ್ಣ ಮಹೋತ್ಸವ ಆಚರಣೆ, 1999ರಲ್ಲಿ ಅಮೃತ ಮಹೋತ್ಸವ ಆಚರಣೆಯನ್ನು ಕಂಡಿದೆ. ಇದೀಗ 100ನೇ ವರ್ಷಾಚರಣೆಗೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಯಾವ ರೀತಿ ಶತಮಾನೋತ್ಸವ ಆಚರಣೆ ಮಾಡಬೇಕು ಎಂಬ ಚರ್ಚೆ ನಡೆದಿದೆ.

  ಈ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಉನ್ನತ ಮಟ್ಟದ ಸಮಿತಿ ಸಭೆಯ ಮಾದರಿಯಲ್ಲೂ ಎಂಎಂಸಿ ಆರ್‌ಐನ 100ನೇ ವರ್ಷದ ಸಂಭ್ರಮಾಚರಣೆ ಕುರಿತು ಜಿಲ್ಲೆಯ ಸಂಸದರು, ಶಾಸಕರು, ಎಂಎಲ್‌ಸಿಗಳು, ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಸಭೆ ನಡೆಯಲಿದೆ. ಅಲ್ಲಿ ಚರ್ಚಿಸಿ ಅಂತಿಮ ರೂಪರೇಷೆ ಸಿದ್ಧಪಡಿಸಲಾಗುತ್ತದೆ. ಜತೆಗೆ, ಹೊಸ ಕಾರ್ಯಕ್ರಮ, ವಿವಿಧ ಕಾಮಗಾರಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

  ಕೆ.ಆರ್.ಆಸ್ಪತ್ರೆಯಲ್ಲಿ ಶತಮಾನೋತ್ಸವ ಬ್ಲಾಕ್ ನಿರ್ಮಾಣದ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಅದಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಆಡಳಿತಾತ್ಮಕ ಅನುಮತಿ ಬಳಿಕ ಈ ಕಾಮಗಾರಿಯ ಸ್ಪಷ್ಟ ಚಿತ್ರಣ ದೊರೆಯಲಿದೆ.
  ಡಾ.ಕೆ.ಆರ್.ದಾಕ್ಷಾಯಿಣಿ
  ನಿರ್ದೇಶಕರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts