ಮೈಸೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕಿದ್ದ ಮೈಸೂರು ತಾಲೂಕು ಹಾರೋಹಳ್ಳಿ ಜಮೀನಿನಲ್ಲಿ ಈಗ ದಕ್ಷಿಣ ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕೆ ಬುಧವಾರ ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಬೋಧಿವೃಕ್ಷ ನೆಡುವ ಮೂಲಕ ಚಾಲನೆ ನೀಡಿದರು.
ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕಿದ್ದ ಸ್ಥಳದಲ್ಲಿ ಹಿಂದುಪರ ಸಂಘಟನೆಗಳು ಜಮೀನು ಮಾಲೀಕ ರಾಮದಾಸ್ ಅವರ ಜತೆಗೂಡಿ ದಕ್ಷಿಣ ಅಯೋಧ್ಯೆ ರಾಮಮಂದಿರ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಸಿದ್ಧತೆ ಮಾಡಿಕೊಂಡು ಇತ್ತೀಚೆಗೆ ಪೂಜೆ ಮಾಡಲು ಮುಂದಾಗಿದ್ದರು. ಆದರೆ, ಈ ವೇಳೆ ಹಾರೋಹಳ್ಳಿ ಗ್ರಾಮಸ್ಥರು, ರಾಮದಾಸ್ ಅವರ ಸಹೋದರರ ಮಕ್ಕಳು ಮತ್ತು ಪ್ರಗತಿಪರ ಸಂಘಟನೆಗಳು, ದಲಿತ ಒಕ್ಕೂಟಗಳು ತೀವ್ರ ವಿರೋಧ ಒಡ್ಡಿ ಯಾವುದೇ ಕಾರಣಕ್ಕೂ ರಾಮ, ಹನುಮ ಮಂದಿರ ನಿರ್ಮಿಸಲು ಬಿಡುವುದಿಲ್ಲ. ಈ ಜಾಗದಲ್ಲಿ ದಕ್ಷಿಣದ ಬುದ್ಧ ಗಯಾ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಒತ್ತಡ ಹೇರಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ, ಕೊನೆಗೆ ದೇವಸ್ಥಾನ ನಿರ್ಮಾಣ ಪೂಜೆ ಕೈಬಿಡಲಾಗಿತ್ತು.
ಜಮೀನು ಮಾಲೀಕ ರಾಮದಾಸ್ ಎಲ್ಲರ ಒತ್ತಡಕ್ಕೆ ಮಣಿದು ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕೆ ನನ್ನ ಜಮೀನನ್ನು ನೀಡುವುದಾಗಿ ಘೋಷಣೆ ಮಾಡಿದರು. ಹೀಗಾಗಿ, ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳ ಜತೆಗೂಡಿ ರಾಮದಾಸ್ ಅವರ ಸಹೋದರ ಡಿ.ರಾಜು ಪುತ್ರ ಸುರೇಶ್ ಅವರ ಮೂಲಕ ಬುದ್ಧ ಗಯಾ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಹಾರೋಹಳ್ಳಿ ಬಸ್ ನಿಲ್ದಾಣದಿಂದ ಜಮೀನಿನವರೆಗೂ ಗೌತಮ ಬುದ್ಧ, ಅಂಬೇಡ್ಕರ್ ಭಾವಚಿತ್ರ, ನೀಲಿ ಧ್ವಜ ಹಾಗೂ ಬುದ್ಧ ಧ್ವಜ ಹಿಡಿದು ಶಾಂತಿಯುತ ಪಾದಯಾತ್ರೆ ನಡೆಸಲಾಯಿತು. ಜಮೀನಿಗೆ ತೆರಳುವ ಮಾರ್ಗದಲ್ಲಿ ದಕ್ಷಿಣ ಭಾರತದ ಬುದ್ಧ ಗಯಾ, ಬುದ್ಧ ಮಾರ್ಗ ಎಂದು ನಾಮಫಲಕ ಅನಾವರಣ ಮಾಡಲಾಯಿತು. ಬುದ್ಧ ಪೂರ್ಣಿಮೆಯ 2569ನೇ ದಿನದ ಅಂಗವಾಗಿ ದಕ್ಷಿಣ ಭಾರತದ ಬುದ್ಧ ಗಯಾ ನಿರ್ಮಾಣಕ್ಕಾಗಿ ಬೋಧಿವೃಕ್ಷ ಗಿಡನೆಟ್ಟು, ಧಮ್ಮ ಸಂಕಲ್ಪ ಜಾಗೃತಿ ಸಮಾವೇಶ ನಡೆಸಲಾಯಿತು.
ಸುರೇಶ್ ಮಾತನಾಡಿ, ಮೊದಲನೇ ಬಾರಿಗೆ ಈ ಜಾಗದಲ್ಲಿ ಪೂಜಾ ಕಾರ್ಯಕ್ರಮ ಆಯೋಜಿಸಿದ್ದಾಗ ಮಹಿಷ ದಸರಾ ಮಾಡಲು ಬಿಡದ ಮಾಜಿ ಸಂಸದ ಪ್ರತಾಪಸಿಂಹ ಅವರನ್ನು ವಿರೋಧಿಸಿದ್ದೆ. ಬಳಿಕ ಜಮೀನಿಲ್ಲಿ ದೇವಸ್ಥಾನ ನಿರ್ಮಾಣದ ಆಹ್ವಾನ ಪತ್ರ ನೀಡಿದಾಗ ಸಹಿಸಲು ಆಗಲಿಲ್ಲ. ಹಾಗಾಗಿ ಪ್ರತಿಭಟನೆ ಹಾದಿ ಹಿಡಿಯಬೇಕಾಯಿತು ಎಂದು ಹೇಳಿದರು.
ನಮ್ಮ ತಂದೆ, ತಾಯಿ ಡಿ. ರಾಜು ಮತ್ತು ರಾಜಮ್ಮ ಅವರು ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕೆ ಒಂದು ಎಕರೆ ಜಮೀನನ್ನು ದಾನ ನೀಡಿದ್ದಾರೆ. ಇಲ್ಲಿ ಬುದ್ಧ ಮಂದಿರ ಸ್ಥಾಪನೆ ಮಾಡಿ, ಸಾಧ್ಯವಾದರೆ ಶಾಲೆ ತೆರೆಯುವ ಯೋಜನೆ ಇದೆ ಎಂದು ಹೇಳಿದರು.
ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ, ಉತ್ತರ ಭಾರತದಲ್ಲಿ ಬೌದ್ಧ ವಿಹಾರವನ್ನು ಮನುವಾದಿಗಳು ನೆಲಸಮ ಮಾಡಿದ್ದಾರೆ. ಬುದ್ಧ ಗಯಾದಲ್ಲಿ ಮನುವಾದಿಗಳ ವಿರುದ್ಧ ನಮ್ಮವರು ಸಂಘರ್ಷ ನಡೆಸುತ್ತಿದ್ದಾರೆ. ಅಂಬೇಡ್ಕರ್ ಧ್ವನಿಯನ್ನು ದಮನ ಮಾಡುವುದೇ ಮನೋವಾದಿಗಳ ಕೆಲಸವೆಂದು ಟೀಕಿಸಿದರು.
ರಾಮದಾಸ್ ಪುತ್ರ ಕೃಷ್ಣದಾಸ್ ಮಾತನಾಡಿ, ನಮ್ಮ ಜಮೀನಿನಲ್ಲಿ ಕಲ್ಲು ಸಿಕ್ಕಿ, ತೆಗೆದುಕೊಂಡು ಹೋಗಿರುವುದು ನಿಜ. ಗ್ರಾಮದವರು ಮತ್ತು ಶಾಸಕರು ಇಲ್ಲಿ ಒಂದು ದೇವಸ್ಥಾನ ಮಾಡೋಣ ಎಂದು ಹೇಳಿದ್ದರಿಂದ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಆದರೆ, ನಾವು ನಮ್ಮ ಜನರ ವಿರೋಧ ಕಟ್ಟಿಕೊಂಡು, ರಾಮ ಮಂದಿರ ನಿರ್ಮಾಣ ಮಾಡಲು ಹೋಗುವುದಿಲ್ಲ ಎಂದರು.
ಮುಖಂಡರಾದ ಆರ್. ಮಹದೇವಪ್ಪ, ಬೆಟ್ಟಯ್ಯಕೋಟೆ ಮಾತನಾಡಿದರು. ಧಮ್ಮ ಭಿಕ್ಕು ಡಾ. ಕಲ್ಯಾಣ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಸುಗತ ಪಾಲಬಂತೇಜಿ, ಗೌತಮಿ ಬಂತೆಜೀ, ದಸಂಸ ಮುಖಂಡರಾದ ಹರಿಹರ ಆನಂದಸ್ವಾಮಿ, ಆಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ತಾ.ಪಂ. ಮಾಜಿ ಸದಸ್ಯ ಸುರೇಶ್‌ಕುಮಾರ್, ಕಲ್ಲಹಳ್ಳಿ ಕುಮಾರ್, ನಟರಾಜು, ನಾಗವಾಲ ನರೇಂದ್ರ, ಬೆಳವಾಡಿ ಶಿವಕುಮಾರ್, ಶಿವಬುದ್ದಿ, ಹಾರೋಹಳ್ಳಿ ಮುಖಂಡರಾದ ಚೆಲುವರಾಜು, ಪ್ರಸನ್ನ ತೊಳೂರು, ಶಿವರಾಜು, ಹನುಗಳ್ಳಿ ವೆಂಕಟೇಶ್ ಇತರರು ಇದ್ದರು.
ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕೆ ಚಾಲನೆ

You Might Also Like
ತಂದೆಯ ಈ ಒಂದು ಅಭ್ಯಾಸದಿಂದ ಅಂಜುಬುರಕ ಮಗುವಿಗೆ ಜನ್ಮ ನೀಡಬಹುದು! | Habit
Habit: ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ, ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲ, ಒತ್ತಡಕ್ಕೂ ಒಳಗಾಗಬಾರದು.…
ಸೊಂಟನೋವು, ಬೆನ್ನುನೋವಿನ ನಿಯಂತ್ರಣಕ್ಕೆ ಶಲಭಾಸನ
ಆಧುನಿಕ ಜೀವನ ಶೈಲಿಯ ವಿಧಾನದಲ್ಲಿ ಬರುವ ಸೊಂಟ ನೋವು, ಬೆನ್ನುನೋವಿನ ನಿಯಂತ್ರಣಕ್ಕೆ ಯೋಗಾಸನಗಳು ಸಹಕಾರಿಯಾಗುತ್ತವೆ. ಶಲಭಾಸನ,…