ಗಜೇಂದ್ರಗಡ: ರೈತರಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ನಿರಂತರ ವಿದ್ಯುತ್ ಪೂರೈಸಲು ರಾಜ್ಯಾದ್ಯಂತ 181 ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಹೇಳಿದರು.
ಇಂಧನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಇಲ್ಲಿಯ ಹೆಸ್ಕಾಂ ಉಪವಿಭಾಗ ವ್ಯಾಪ್ತಿಯ ಮುಶಿಗೇರಿ ಗ್ರಾಮದಲ್ಲಿ ಪಿಎಂ– ಕುಸುಮ್ಕಾಂಪೊನೆಟ್– ಸಿ ಅಡಿ ಸೌರೀಕರಣ ಯೋಜನೆಗೆ ಸಿಎಂ ಸಿದ್ದರಾಮಯ್ಯ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದ ನಂತರ ಮಾತನಾಡಿದರು. ರೈತರು ರಾತ್ರಿ ಹೊಲಗಳಿಗೆ ತೆರಳಿ ಬೆಳೆಗಳಿಗೆ ನೀರು ಹಾಯಿಸುವುದನ್ನು ತಪ್ಪಿಸಲು ಸೋಲಾರ್ ವಿದ್ಯುತ್ ಘಟಕಗಳು ಸಹಾಯಕವಾಗಲಿವೆ ಎಂದರು.
ಮುಶಿಗೇರಿಯಲ್ಲಿ ನಿರ್ಮಾಣವಾಗಿರುವ ಈ ಪ್ಲಾಂಟ್‌ನಿಂದ 2.16 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಇದರಿಂದ ಐದು ಗ್ರಾಮಗಳಿಗೆ ಅನುಕೂಲವಾಗಲಿದೆ. ಜತೆಗೆ ಎರಡು ಕೃಷಿ ಫೀಡರ್ ನಿರ್ಮಾಣವಾಗಲಿದ್ದು, 550 ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮುಶಿಗೇರಿ ಗ್ರಾಮದ ರೈತರೊಂದಿಗೆ ವರ್ಚುವಲ್ ವೇದಿಕೆ ಮೂಲಕವೇ ಸಂವಾದ ನಡೆಸಿದರು.
ಹೆಸ್ಕಾಂ ಅಧ್ಯಕ್ಷ ಸೈಯದ ಅಜ್ಜಂಪೀರ್ ಖಾದ್ರಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಜಗದೀಶ ಎಸ್. ಮುಶಿಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ ಮತ್ತಿತರರು ಇದ್ದರು.