ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರು ಜನರ ಕಲ್ಯಾಣಕ್ಕಾಗಿ, ದೇಶದ ಹಿತಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದರೆ ಕಾಂಗ್ರೆಸ್ ಪಕ್ಷದ ನಾಯಕರು ದಲಿತರು, ಹಿಂದುಳಿದವರು ಪ್ರಧಾನಿಯಾಗಬಾರದು. ಅವರನ್ನು ಆಡಳಿತದಿಂದ ದೂರ ಇಡಬೇಕು ಎಂಬ ಕುಹಕ ಬುದ್ಧಿ ಉಪಯೋಗಿಸಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಸಂವಿಧಾನ ತಿದ್ದುಪಡಿ ಮಾಡಿಕೊಂಡರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ತಮ್ಮ ನಿವಾಸದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಭೀಮ ಸಂಗಮ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸರ್ವಾಧಿಕಾರಿಯಂತೆ ಆಡಳಿತ ನಡೆಸಲು ಹಾಗೂ ತಮ್ಮ ಕಪಿಮುಷ್ಠಿಯಿಂದ ಆಡಳಿತ ಬೇರೆಯವರ ಕೈಯಲ್ಲಿ ಹೋಗಬಾರದು ಅಂತ ನೆಹರು, ರಾಜೀವ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಸಂವಿಧಾನ ಆಶಯಕ್ಕೆ ಧಕ್ಕೆ ತಂದರು. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ ಬರೆದ ಸಂವಿಧಾನ ಕಾಂಗ್ರೆಸ್ ಸ್ವಾರ್ಥ ರಾಜಕಾರಣಕ್ಕೆ ಹೆಚ್ಚು ಬಳಸಿಕೊಂಡಿದೆ ಎಂದರು.
ದೇಶದ ಜನರಿಗೆ ಸಹಾಯ ಮಾಡಲು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಎಲ್ಲರಿಗೂ ಅನ್ವಯವಾಗಬೇಕು ಎಂದು ಬಿಜೆಪಿ ಕೆಲಸ ಮಾಡುತ್ತಿದೆ. ಸ್ವಾರ್ಥ ರಾಜಕಾರಣಕ್ಕೆ ಬಿಜೆಪಿ ಆಡಳಿತದಲ್ಲಿ ಎಂದಿಗೂ ತಿದ್ದುಪಡಿ ಮಾಡಿಲ್ಲ. ಸಂವಿಧಾನ ಎತ್ತಿ ಹಿಡಿದವರು ಯಾರು ಎನ್ನುವುದು ಜನರ ಜಾಗೃತಿಗೋಸ್ಕರ ಬಿಜೆಪಿಯಿಂದ ದೇಶದಲ್ಲಿ ಭೀಮ ಸಂಗಮ ಅಭಿಯಾನ ಆರಂಭಿಸಿದೆ. ಡಾ.ಅಂಬೇಡ್ಕರ ಬರೆದಿರುವ ಸಂವಿಧಾನ ಬಗ್ಗೆ ತಿಳಿಸುವುದು ಹಾಗೂ ಸಾರ್ವಜನಿಕ ಸಭೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ದೇಶದಲ್ಲಿ ಕೋವಿಡ್ ವಿಪತ್ತುಗಳು ಸಂಭವಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ರಕ್ಷಣೆಗೆ ನಿಂತು ಅನ್ನದ ಹಕ್ಕು ನೀಡಿದರು. ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದು ಪ್ರಧಾನಿ ಮೋದಿ. ಸಿದ್ದರಾಮಯ್ಯನವರು ಅಕ್ಕಿಕೊಟ್ಟಿಲ್ಲ. ಚೀಲ ಮಾತ್ರ ಅವರದ್ದು, ಅಕ್ಕಿ ಕೇಂದ್ರ ಸರ್ಕಾರದ್ದು. ದೇಶದಲ್ಲಿ ಬಿಜೆಪಿ ಜನಪರ ಕೆಲಸ ಮಾಡಿದ್ದನ್ನು ಸಹಿಸಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಜನರಿಗೆ ತಪ್ಪು ಸಂದೇಶ ನೀಡುವ ಮೂಲಕ ಕುತಂತ್ರ ರಾಜಕಾರಣ ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ ಎಂದು ದೂರಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ ಬಹುಪಾಲ ಆಡಳಿತ ನಡೆಸಿದ ಕಾಂಗ್ರೆಸ್ ಪ್ರತಿಯೊಬ್ಬರನ್ನು ಸರಿಸಮಾನಾಗಿ ನೋಡಲಿಲ್ಲ. ಸಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲಿಲ್ಲ. ಅಸ್ಪಶ್ಯತೆ ಜೀವಂತ ಉಳಿಯುವಂತೆ ಮಾಡಿತು. ಆದರೆ ಪ್ರಧಾನಿ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರು ದೇಶದ ಜನರೆಲ್ಲ ಒಂದೇ ಎಂದು ಆಡಳಿತ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ನಂತರ ಮಹಿಳೆಯರಿಗೆ ಸಹ ಭೋಜನ ಹಾಗೂ ಉಡಿತುಂಬುವ ಕಾರ್ಯಕ್ರಮ ಪಿ.ಎಚ್.ಪೂಜಾರ ನಿವಾಸದಲ್ಲಿ ನಡೆಯಿತು. ಮುಖಂಡರಾದ ಶಂಭುಗೌಡ ಪಾಟೀಲ, ಡಾ.ಶೇಖರ ಮಾನೆ, ಸಂಗಣ್ಣ ಕುಪ್ಪಸ್ತ, ರಾಜು ಚಿತ್ತವಾಡಗಿ, ರಾಘವೇಂದ್ರ ನಾಗೂರ, ಸಂಗಣ್ಣಗೌಡ ಗೌಡರ, ರಾಜು ನಾಯಕ ಇದ್ದರು.