ಆಲಮಟ್ಟಿ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಆಲಮಟ್ಟಿಯವರೆಗೆ 62 ಕಿ.ಮೀ.ವರೆಗೆ ಮಾನವ ಸರಪಳಿ ಯಶಸ್ವಿಯಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಬೀದರ್‌ನಿಂದ ಚಾಮರಾಜನಗರವರೆಗೂ ಸಮಾಜದ ಎಲ್ಲ ವರ್ಗದ ಜನರೂ ಸೇರಿ 25 ಲಕ್ಷ ಜನರು ಕೈ ಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ರಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಆಲಮಟ್ಟಿಯಲ್ಲಿ ಅವರು ಮಾತನಾಡಿದರು.
ಸಂವಿಧಾನ ಪ್ರತಿಯೊಬ್ಬರಿಗೆ ಸಮಾನ ಅವಕಾಶ ನೀಡಿದ್ದು, ಅದರ ಆಶಯದಂತೆ ಎಲ್ಲರೂ ನಡೆಯೋಣ. ನಾವೆಲ್ಲರೂ ಸಂವಿಧಾನದ ಆಶಯಕ್ಕನುಗುಣವಾಗಿ ನಡೆದುಕೊಳ್ಳುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಸಾಕಾರಗೊಳಿಸೋಣ ಎಂದರು.
ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ, ಮಾಧ್ಯಮ ಹಾಗೂ ಸಾರ್ವಜನಿಕರಿಂದ ವಿವಿಧ ಕ್ಷೇತ್ರಗಳಲ್ಲಿ ಸಸಿ ನೆಡುವುದರೊಂದಿಗೆ ಆಯಾ ಕ್ಷೇತ್ರಗಳನ್ನು ಅರ್ಪಣೆ ಮಾಡುವ ಮೂಲಕ ಜಿಲ್ಲಾದ್ಯಂತ ಪ್ರಜಾಪ್ರಭುತ್ವ ವನ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದರು.
ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ರಿಷಿಕೇಶ ಸೋನಾವಣೆ, ಗ್ರಾಪಂ ಅಧ್ಯಕ್ಷೆ ಕವಿತಾ ಎಂ.ಬಡಿಗೇರ, ಉಪಾಧ್ಯಕ್ಷೆ ಸಿದ್ದಮ್ಮ ವಾಲೀಕಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಕೆಬಿಜೆನ್ನೆಲ್ ಅರಣ್ಯ ವಿಭಾಗದ ಆರ್‌ಎ್ಒ ಮಹೇಶ ಪಾಟೀಲ, ಕೆಬಿಜೆಎನ್‌ಎಲ್ ಅಧೀಕ್ಷಕ ಇಂಜಿನಿಯರ್ ವಿ.ಆರ್.ಹಿರೇಗೌಡರ, ತಹಸೀಲ್ದಾರ್ ಎ.ಡಿ.ಅಮರಾವದಗಿ ಇತರರಿದ್ದರು.