ಸಂವಿಧಾನ ಕಾನೂನಿನ ತಾಯಿ ಇದ್ದಂತೆ

ಚಾಮರಾಜನಗರ: ನಮ್ಮ ದೇಶದ ಜನರ ಚಟುವಟಿಕೆಗಳು ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿದ್ದು, ಸಂವಿಧಾನವು ಕಾನೂನಿನ ತಾಯಿ ಇದ್ದಂತೆ. ಹೀಗಾಗಿ ಎಲ್ಲರೂ ಸಂವಿಧಾನವನ್ನು ತಾಯಿ ಎಂದು ಭಾವಿಸಿ ಅರ್ಥ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಲಹೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ ಸಮಿತಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಓದು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನವು ಕಥೆ, ಕಾದಂಬರಿ, ಕವಿತೆಯಲ.್ಲ ಅದೊಂದು ಕಾರ್ಯಕ್ರಮ. ಪಾಳೇಗಾರಿಕೆ, ವಸಾಹತುಶಾಹಿ, ಸಾಮಂತಿಕೆಗಳನ್ನು ರದ್ದು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿದೆ. ಮೌಢ್ಯವನ್ನು ಹೋಗಲಾಡಿಸಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಂಡು ಎಲ್ಲರೂ ಸಮನಾಗಿ ಬದುಕುವಂತಹ ಅವಕಾಶ ಮಾಡಿಕೊಟ್ಟಿದೆ. ಅದನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಡೀ ಭಾರತೀಯರಿಗೆ ಸಂವಿಧಾನವು ಮಹಾಗ್ರಂಥವಾಗಿದೆ. ಜಗತ್ತಿನ 198 ರಾಷ್ಟ್ರಗಳ ಪೈಕಿ 193ರಲ್ಲಿ ತಮ್ಮದೇ ಆದ ಸಂವಿಧಾನವಿದ್ದು ಅವರು ತಮ್ಮ ಸಂವಿಧಾನಗಳನ್ನು ಓದಿ ಅರ್ಥ ಮಾಡಿಕೊಂಡಿದ್ದಾರೆ. ನಾವು ಅವರಂತೆ ಆಗಬೇಕಿದೆ ಎಂದರು.

ನಮ್ಮ ದೇಶದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಜಾತಿ ವ್ಯವಸ್ಥೆ ಸಡಿಲಗೊಂಡು ಹಿಂದುಳಿದ ವರ್ಗದವರು ರಾಷ್ಟ್ರಪತಿ, ಪ್ರಧಾನಿ ಆಗಿದ್ದಾರೆ. ಕಡುಬಡವರಾಗಿದ್ದ ಅಸ್ಪಶ್ಯರ ಮಕ್ಕಳು ನ್ಯಾಯವಾದಿಗಳಾಗಿದ್ದಾರೆ. ಇದಕ್ಕೆಲ್ಲ ಸಂವಿಧಾನ ಕಾರಣ ಎಂದು ತಿಳಿಸಿದರು.

ಭಾರತ ಗಣರಾಜ್ಯವಾಗಿ 68 ವರ್ಷಗಳು ಕಳೆದಿದ್ದು ಸಾಕಷ್ಟು ಸಾಧನೆಗಳಾಗಿವೆ. ಯಾವುದೇ ಸಾಧನೆ ಆಗಿಲ್ಲ ಎಂದು ಹೇಳುವುದು ಮೂರ್ಖತನ. ಸಂವಿಧಾನ ಜಾರಿಯಾದ ನಂತರ ಭೂ ಸುಧಾರಣೆಯಾಗಿದೆ. ಶಿಕ್ಷಣದಲ್ಲಿ ಪ್ರಗತಿಯಾಗಿದೆ. ಉದ್ಯೋಗಾವಕಾಶ ಲಭಿಸಿದೆ. ಆರೋಗ್ಯ, ರಸ್ತೆ ಸೇವೆ ಲಭ್ಯವಾಗಿದೆ. ಮೂಲಸೌಕರ್ಯ ಕಲ್ಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ತಾಂತ್ರಿಕತೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಮುಖ ದೇಶಗಳ ಸಾಲಿನಲ್ಲಿದ್ದೇವೆ ಎಂದು ತಿಳಿಸಿದರು.

ಆದರೆ, ನಮ್ಮ ದೇಶದಲ್ಲಿ ಭಯೋತ್ಪಾದನೆ, ಬಡತನ, ನಿರುದ್ಯೋಗ, ಮೂಲಭೂತವಾದಿತನ, ಸಾಂಸ್ಕೃತಿಕ ದಿವಾಳಿತನ, ಉದಾರೀಕರಣ ಸೇರಿದಂತೆ ಹಲವು ಸಮಸ್ಯೆಗಳಿವೆ. ನಮ್ಮ ದೇಶದ ಮುಂದೆ ಅನೇಕ ಸವಾಲು ಮತ್ತು ಸಮಸ್ಯೆಗಳಿವೆ. ಇದಕ್ಕೆಲ್ಲ ಸಂವಿಧಾನ ಕಾರಣ ಎಂಬುದು ತಪ್ಪು ತಿಳಿವಳಿಕೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿರುವ ಸಮಸ್ಯೆಗಳಿಗೆ ಸಂವಿಧಾನ ಕಾರಣವಲ್ಲ. ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ಇರುವುದೇ ಕಾರಣ. ಸಂವಿಧಾನ ಎಷ್ಟೇ ಚೆನ್ನಾಗಿದ್ದರೂ ಜಾರಿಗೊಳಿಸುವವರು ಕೆಟ್ಟವರಾಗಿದ್ದರೆ ಸಂವಿಧಾನದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಜೆ.ಸೋಮಶೇಖರ್ ಮಾತನಾಡಿದರು. ಹೋರಾಟಗಾರರಾದ ವಿಮಲಾ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಇತರರಿದ್ದರು.

ಸುಡುವವರು ಅನಾಗರಿಕರು: ದೇಶದ ಸಂವಿಧಾನವನ್ನು ಸುಡುವವರು ಅನಾಗರಿಕರು ಮತ್ತು ದೇಶದ್ರೋಹಿಗಳು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಕಿಡಿಕಾರಿದರು. ಯಾರೊಬ್ಬರೂಸಂವಿಧಾನವನ್ನು ಓದದೆ ಸುಡುವುದು ಸರಿಯೇ? ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರು ಪರ್ಯಾಯವಾಗಿ ಏನು ಮಾಡಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯವನ್ನು ಮೂಲಭೂತ ಹಕ್ಕಾಗಿ ಘೋಷಿಸುವರೇ ಎಂದು ಪ್ರಶ್ನಿಸಿದರು.